
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಬುದ್ಧಿಮಾತಿದು ನಿನಗೆ.
ಬುದ್ಧಿ =ಸರಿಯಾದ ತಿಳುವಳಿಕೆ, ಗೊಂದಲ ರಹಿತ ನಿಶ್ಚಯಾತ್ಮಕ ದೃಢ ಜ್ಞಾನ,ಅಪಾಯಕ್ಕೊಡ್ಡದ ಸುರಕ್ಷಿತದ ಅರಿವು! ಇದು ಬದುಕಿನ ದಿಕ್ಸೂಚಿ! ಆಕಾಶದಲ್ಲಿ ಹಾರುವ ವಿಮಾನಕ್ಕೆ ಸಾಗುವ ಮಾರ್ಗ ತೋರುವುದು ದಿಕ್ಸೂಚಿ! ವಾಹನ ಸಾಗಬೇಕಾದ ದಾರಿ ತೋರುವುದು ಗೂಗಲ್ ನಕ್ಷೆ! ಬಲ್ಲವರು ತೋರುವರು ತಲುಪಬೇಕಾದ ಸ್ಥಳದ ಮಾರ್ಗವನ್ನು! ಬುದ್ಧಿ ಶೂನ್ಯ ಬದುಕು ಕತ್ತಲೆ, ಅಪಾಯ ಪ್ರಪಾತ! ಬುದ್ಧಿಗೆ ಬುದ್ಧಿಮಾತಿಗೆ ತಲೆ ಬಾಗಬೇಕು, ಆ ಮಾರ್ಗದಿ ನಡೆಯಬೇಕು. ಇಲ್ಲಿದೆ ಡಿವಿಜಿ ಯವರ ಬುದ್ಧಿಮಾತು: ಅಧಿಕಾರ ವ್ಯವಹಾರ ಅಭಿವೃದ್ಧಿ ಹಣ ಆಸ್ತಿ ಕರ್ತವ್ಯಗಳ ಭರಾಟೆ ಏರಿಳಿತ ಏನೇ ಇರಲಿ, ದೈವ ಕೈ ಕೊಟ್ಟು ಬದುಕು ಶೂನ್ಯ ಎನಿಸಿರಲಿ, ಎದೆಗುಂದದೆ ಎದುರಿಸುವ ಎದೆಗಾರಿಕೆ ಇರಲಿ. ಪವಾಡ ಹೊಸತಲ್ಲ, ಅಸಾಧ್ಯ ಯಾವುದೂ ಇಲ್ಲ! ಭೂಮಿಗಿಂತ ಲಕ್ಷಾಂತರ ಪಾಲು ದೊಡ್ಡದಾದ ಸೂರ್ಯ, ಅದಕ್ಕಿಂತ ಸಾವಿರಾರು ಪಾಲು ದೊಡ್ಡದಾದ ಆಕಾಶಕಾಯಗಳು ಆಕಾಶದಲ್ಲಿ ನಿಂತಿರುವುದು ಪವಾಡವಲ್ಲವೇ? ಅಣುವಿನಲ್ಲಿ ಅದ್ಭುತ ಶಕ್ತಿಯನ್ನಿರಿಸಿದ ದೈವದ ಭವ್ಯತೆಗೆ ಮಿತಿ ಇಲ್ಲ!ಅದಕ್ಕೆ ತಲೆ ಬಾಗಿ, ಎಲ್ಲವನ್ನೂ ಎದುರಿಸಲು ನೀ ಸದಾ ಸಿದ್ಧನಿರು!!