
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಪಾಲಿಗೆ ಬಂದದ್ದು ಪಂಚಾಮೃತ.
ನ್ಯಾಯ – ಪರಿಶ್ರಮದಿಂದ ದೊರೆತದ್ದು ಪಂಚಾಮೃತ.ಇಲ್ಲದ್ದರ ಕೊರಗಿಗಿಂತ ಇರುವುದರ ತೃಪ್ತಿ ಮೇಲು. ಅರಸನೊಬ್ಬ ಮಕ್ಕಳಿಲ್ಲವೆಂದು ಸೊರಗಿದ. ಅನಾಥ ಬಡ ಹುಡುಗನೊಬ್ಬ ಪ್ರಕೃತಿ ಸೊಬಗ ಸವಿದು ಮನದುಂಬಿ ಹಾಡಿದ! ತೃಪ್ತಿ ಮಾನಸಿಕ. ವಸ್ತು ಪ್ರೇರಕ. ವಸ್ತು ತೃಪ್ತಿಯಲ್ಲ. ಒಂದರಂತೆ ಒಂದು, ಒಬ್ಬರಂತೆ ಒಬ್ಬರು ಇಲ್ಲ ಜಗದಲಿ.ಚೆಲುವು, ವಿದ್ಯೆ, ಆಸ್ತಿಗಳಲಿ ಏರುಪೇರಿದ್ದರೂ ಹೊಂದಿಕೆಯ ಕುಟುಂಬದ ತೃಪ್ತಿ ಅಪಾರ! ಅಂಬಲಿ ಉಣ್ಣುವ ಬಡವರ ತೃಪ್ತಿಗೆ ಬರ ಇಲ್ಲ!ಚೆಲುವು ವಿದ್ಯೆ ಸಿರಿಸೂಸುವ ಹಲವು ಕುಟುಂಬಗಳಿಗಿಲ್ಲ ಸುಖ! ಸಾವಿನಲೂ ಒಂದಾಗುವ ಹಿರಿಜೀವಿಗಳನಂತ! ಕಿರಿಹಿರಿವಯಸ್ಸಿನಲೂ ಸಾಗಿದೆ ವಿಚ್ಛೇದನ ಮದುವೆ ವಿಚ್ಛೇದನ ಸರಮಾಲೆ! ಹುಟ್ಟಿ ಬದುಕಿ ಸಾಯುವ ಬಾಳು ಜಟಕಾ ಬಂಡಿ. ಉಸಿರಿದ್ದರೆ ಸಂಬಂಧ,ನಿಂತರೆ ಬರಿ ಶೂನ್ಯ! ಖಾಲಿಯಾಗುವ ಬಾಳಿಗೆ ಬೇಕು ಗೊತ್ತು ಗುರಿ. ಅದೇ ಎದ್ದು ಕಿತ್ತು ತಿನ್ನದಿರಲಿ ನೆಮ್ಮದಿ. ಕೃಷ್ಣನ ಗರಿಮೆ ಕಂಡು ಅಣ್ಣ ಬಲರಾಮ ಅಸೂಯೆಪಟ್ಟನೇ? ಅಣ್ಣ ಪ್ರಧಾನಿಯಾದನೆಂದು, ತಮ್ಮ ಗುಮಾಸ್ತ ಕೊರಗಬೇಕೇ? ಸೊಸೆ ಮಂತ್ರಿಯಾದರೆ ಅತ್ತೆ ಸಿಹಿ ಹಂಚಿ ಸಂಭ್ರಮಿಸಲಿ! ಎಚ್ಚರಿರಲಿ :ಕುತಂತ್ರ ಕುಯುಕ್ತಿ ಮೋಸ ಬಲಾತ್ಕಾರ ಸಾಂದರ್ಭಿಕ ಪ್ರಾಪ್ತವಾದುದು ಪಾಲಲ್ಲ!
ಇರುವುದ ನೆನೆಯೋಣ, ತೃಪ್ತಿಯ ಬಾಳನು ನಡೆಸೋಣ!!