
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ನೀನೊಂದು ಗಾಳಿ ಪಟ ಮಂಕುತಿಮ್ಮ.
ಗಿಡ ಮರ ಕ್ರಿಮಿ ಕೀಟ ಹುಳು ಹುಪ್ಪಡಿ ಪಶು ಪಕ್ಷಿಗಳಿಗೆ ಆಯ ವ್ಯಯ, ನಕ್ಷೆ ಕ್ರಿಯಾಯೋಜನೆ, ಭೂತ ಭವಿಷ್ಯತ್ತುಗಳ ಭಾರೀ ಲೆಕ್ಕಾಚಾರ ಯಾವುದೂ ಇಲ್ಲ!ಅಂದಂದಿನ ತಾತ್ಕಾಲಿಕ ಜೀವನದ ಯೋಜನೆ ಅವುಗಳದ್ದು. ಮನೆ ಗೂಡು ಸಂಗಾತಿ ಬಟ್ಟೆ ಬರೆ ಹಣ ವಾಹನ ಯಾವುದಕ್ಕೂ ಅಂಟಿರದೇ ನಿಶ್ಚಿಂತೆಯಿಂದ ಬದುಕ ಸಾಗಿಸಿವೆ. ನಮಗಿದೆ ರಸ್ತೆ, ಗೂಗಲ್ ಮ್ಯಾಪ್! ಹಕ್ಕಿ ಗಗನಕ್ಕೆ ಹಾರಲು ಎಲ್ಲಿದೆ ನಕ್ಷೆ? ನಮಗಿದೆ ಸಂಚಾರ ನಿಯಮ! ಮೀನು ನೀರೊಳು ಸಾಗಲು ಯಾವ ಸಂಚಾರ ನಿಯಮ? ಯಾವುದೋ ವಿಷಯವೊಂದು ಸೆಳೆಯುವುದು, ಅರಿವಿಲ್ಲದ ಅವ್ಯಕ್ತ ಭಾವವೊಂದು ಅದರತ್ತ ತಳ್ಳುವುದು! ನಾವೊಂದು ಗಾಳಿ ಪಟ! ಹಾರಿಸಿದ ಪಟ ಗಾಳಿ ಬೀಸಿದತ್ತ ನುಗ್ಗುವುದು. ದಾರ ಹಿಡಿದಾತ ಅದರತ್ತ ಓಡುವನು! ಅರ್ಜುನ ಕೇಳಿದ:ಕೃಷ್ಣ! ಇಷ್ಟವಿಲ್ಲದೆಯೂ ಬಲವಂತದಿಂದ ಕೆಲಸ ಮಾಡುತ್ತೇವೆ ಏಕೆ? ಕೃಷ್ಣ ಹೇಳಿದ:ಇದೇ ಕಾಮ ಕ್ರೋಧ ರಜೋಗುಣಗಳ ಒತ್ತಡ! ಹಾಗೆಂದು ನಮ್ಮದೇನೂ ನಡೆಯದೆಂದು, ಪಶುಪಕ್ಷಿಗಳಾದಿಯಂತೆ ಯೋಜನೆ ಇಲ್ಲದೇ ಮನ ಬಂದಂತೆ ಇರಬೇಕಿಲ್ಲ! ಬುದ್ಧಿವಂತ ಮಾನವ ಬುದ್ಧಿ ಬಳಸಿ ಯೋಜನೆ ರೂಪಿಸಿ ಬಾಳೋಣ, ಅಂತಿಮ ಸತ್ಯವ ನೆನೆಯೋಣ!!