
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ.
ದೇವರು ದೊಡ್ಡವ,ಮಾಲೀಕ,ಮಾರಾಟಗಾರ, ನ್ಯಾಯಾಧೀಶ!ಭಕ್ತ ಸಣ್ಣವ, ಸೇವಕ. ಖರೀದಿದಾರ, ಕಕ್ಷಿದಾರ! ಪೂಜಾರಿ, ಎಜೆಂಟ್, ದಲ್ಲಾಳಿ, ವಕೀಲ, ಇವರೀರ್ವರ ನಡುವೆ! ದೇವ ಭಕ್ತರು ನೇರ ವ್ಯವಹರಿಸಿದರೆ ಪೂಜಾರಿ ಕೆಲಸ? ಅದು ಆಗದಿರುವುದೇ ಪೂಜಾರಿಗೆ ವರ! “ಪತ್ರಂ ಪುಷ್ಪಂ ಫಲಂ ತೋಯಂ =ಎಲೆ, ಹೂವು, ಹಣ್ಣು, ನೀರು, ಭಕ್ತಿಭಾವ, ಯಾವುದನ್ನು ಕೊಟ್ಟರೂ ಸ್ವೀಕರಿಸುವೆ, ನಿನ್ನಲ್ಲೇ ಇರುವೆ” ಎನ್ನುವ ದೇವರು! ಪೂಜಾರಿ ಗತಿ? ಅದಕ್ಕೆ ಪಟ್ಟಿ ಉದ್ದ. ಸ್ವರ್ಗ ಪ್ರಾಪ್ತಿಗೆ, ನರಕ ನಿವಾರಣೆಗೆ, ಬಂಗಾರ ಬೆಳ್ಳಿ ಸೇವೆ, ವಸ್ತ್ರ ಧಾನ್ಯ ದಕ್ಷಿಣೆ ಇತ್ಯಾದಿ. ದೇವರಿಗೂ ಸೈ, ತನಗೂ ಸೈ, ಭಕ್ತನಿಗೂ ಖುಷಿಗೊಂಡ ಪೂಜಾರಿಯಿಂದ ಕೆರೆಯ ನೀರನು ಕೆರೆಗೆ ಚೆಲ್ಲುತ,ಶಾಲು ಹಾರ ಹಣ್ಣುಗಳೊಂದಿಗೆ ಸಕಲ ಇಷ್ಟಾರ್ಥಸಿದ್ಧಿರಸ್ತು ಆಶೀರ್ವಾದ! ಇಲ್ಲದಿರೆ ಇಲ್ಲ ವರ! ಸರ್ಕಾರ ನೀಡಿದ ಅನುದಾನ ಪಡೆಯಲು ಮೇಲು ಕೀಳು ಪೂಜಾರಿ ದಲ್ಲಾಳಿಗಳಿಗೆ ಭರ್ಜರಿ ನೋಡಿಕೊಳ್ಳಬೇಕು! ಇಲ್ಲದಿರೆ ಕಡತ ಚರ್ಚಿಸಿ! ಸರ್ಕಾರದ ಹಾಸಿಗೆ ಪಡೆಯಲು ಕೊರೋನಾ ಸೋಂಕಿತ ಕೊಡಬೇಕು ಮಧ್ಯವರ್ತಿಗೆ ಅರ್ಧಲಕ್ಷ! ಇಲ್ಲದಿರೆ ಹಾಸಿಗೆ ಭರ್ತಿ! ಹತ್ತು ಲಕ್ಷದ ಮನೆಯ ಮಾರುವ ದಲ್ಲಾಳಿ ಹದಿಮೂರು ಲಕ್ಷಕೆ. ಜೇಬಿಗಿಳಿಸುವನು ಮೂರು ಲಕ್ಷ! ಇಲ್ಲದಿರೆ ವ್ಯವಹಾರ ಮುರಿಯುವ!
ಜಾಗ್ರತರಾಗೋಣ, ಮಧ್ಯವರ್ತಿಯ ಗೆಲ್ಲೋಣ!!