
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ.
ದುಡ್ಡು ಎಲ್ಲಕ್ಕೂ ಮಿಗಿಲು ದೊಡ್ಡಪ್ಪ! ಇದು ನಮ್ಮ ತಿಳುವಳಿಕೆ. ಅದಕ್ಕೇ ನಡೆದಿದೆ ಒಬ್ಬರನ್ನೊಬ್ಬರು ಸುಲಿದು ತಿನ್ನುವ ದುಷ್ಕೃತ್ಯ! ಕೇಳಬಾರದ್ದು, ನೋಡಬಾರದ್ದು, ಹೇಳಬಾರದ್ದು ನಡೆಯುತಿದೆ ಮಿತಿಲಜ್ಜೆಗೆಟ್ಟು! ಕೊರೋನಾ ದುಷ್ಕಾಲ ನಿದರ್ಶನ! ಉಸಿರಿಗೆ ಬೇಕು ಆಮ್ಲಜನಕ, ಹಣ ಆಗದು! ಹಣ ಹೊಟ್ಟೆಗೆ ತಿನ್ನಲಾಗದು! ಇದು ತಿಳಿದಿರಲಿ. ಇದೇ ಜ್ಞಾನ ವಿದ್ಯೆ! ಇದು ಹಣದ ಅಪ್ಪ! ವಿದ್ಯೆಗಾಗಿ ಹಣ ಹೋಗುತ್ತೆ. ಹಣವೇ ದೊಡ್ಡದಿರೆ ಅದ ಕಳೆದು ವಿದ್ಯೆ ಪಡೆಯುವುದೇಕೆ? ವಿದ್ಯೆ ಹಣ ಗಳಿಸುತ್ತೆ. ಅಮೇರಿಕದ ಆಲ್ಪಾಬೆಟ್ ಅಧಿಕಾರಿ ಭಾರತೀಯ ಸುಂದರ ಪಿಚೈ 2019 ರಲ್ಲಿ ಪಡೆದ ವೇತನ 2144.53 ಕೋಟಿ ರೂ! ವಿದ್ಯೆ ಜ್ಞಾನವಿಲ್ಲದ ಹುಚ್ಚನಿಗೆ ವೇತನವುಂಟೇ? ಹಣವಿದ್ದರೂ ಅದ ಬಳಸುವ ನೈಪುಣ್ಯ ಬೇಕು! ಹಣವಂತರೆಲ್ಲ ಟಾಟಾ ಬಿರ್ಲಾ ಅಜೀಜ್ ಪ್ರೇಮ್ಜಿ ನಾರಾಯಣ ಮೂರ್ತಿ ಆಗರು! ದಡ್ಡ ಹಣವಂತ ಮಣ್ಣು ಮುಕ್ಕುವ, ಜೈಲು ಸೇರುವ! ವಿದ್ಯಾಬುದ್ಧಿಯ ಬಡವ ಹಣವಂತ ದೇಶ ನಡೆಸುವ, ಜನರ ಹೃದಯ ಗೆಲ್ಲುವ!ವಿದ್ಯಾಘನತೆಗಾಗಿ, ರಾಜ್ಯ ತೊರೆದು ಸಿದ್ಧಾರ್ಥ ಬುದ್ಧನಾದ, ಸಂಪತ್ತು ತೊರೆದು ಶ್ರೀನಿವಾಸ ಪುರಂದರದಾಸನಾದ, ವಾರ್ಷಿಕy ಎಪ್ಪತ್ತೈದು ಕೋಟಿ ವೇತನ ತೊರೆದು ರಿಲಯನ್ಸ್ ಪ್ರಕಾಶ ಷಾ ಜೈನಮುನಿಯಾದ! ನೆನಪಿರಲಿ, ನೀರ ಕಮಲಲಿ ನಿಂತ ಲಕ್ಷ್ಮೀ ಚಂಚಲೆ! ಭೂಶಿಲಾಸನದಿ ಕುಳಿತ ಸರಸ್ವತೀ ಸುಭದ್ರೆ!
ವಿದ್ಯೆಯ ಗಳಿಸೋಣ, ವಿದ್ಯಾವಂತಗೆ ಬಾಗೋಣ!!