
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ದುಃಖ.
ದುಃಖ ಯಾರಿಗೂ ಬೇಡ. ಆದರೆ ತಪ್ಪದು. ಸುಖಕ್ಕೆ ಕಳೆ ಕಟ್ಟುವುದೇ ದುಃಖ! ಅಜ್ಞಾನ ಅನಾಚಾರ ಅಶುಚಿ ಸುಳ್ಳು ಕಳ್ಳತನ ಲಂಚ ವಂಚನೆ ದುರಾಶೆ ದ್ರೋಹ ದೌರ್ಜನ್ಯ ದೌರ್ಬಲ್ಯ ಆಲಸ್ಯ ಮಾಲಿನ್ಯ ತಪ್ಪು ತಿಳುವಳಿಕೆ ಸ್ವಾರ್ಥ ಕ್ರೋಧ ಮದ ಮತ್ಸರಗಳು ದುಃಖದ ಮೂಲ. ತಿಳಿಯದೇ ಸಹಿ ಮಾಡಿ, ಹಣ ದ್ವಿಗುಣ ತ್ರಿಗುಣದ ದುರಾಶೆಗೊಳಗಾಗಿ ಹಣ ಆಸ್ತಿ ಕಳೆದುಕೊಂಡರೆ ದುಃಖ! ಎಲ್ಲ ತನಗಿರಲೆಂಬ ಸ್ವಾರ್ಥಿ ಪರರನ್ನು ದುಃಖ ಕೂಪಕ್ಕೆ ತಳ್ಳುವ! ಸಾಮರ್ಥ್ಯ ಮೀರಿದ ಹೆಸರು ಕೀರ್ತಿ ಸ್ಥಾನ ಮಾನ ಸುಖ ಸೌಲಭ್ಯ ಗಳಿಸುವ ಆಶೆಗೊಳಗಾಗಿ ಸಾಲದ ಸುಳಿಗೆ ಸಿಕ್ಕು, ಮೋಸವೆಸಗಿ, ಕುತಂತ್ರ ಷಡ್ಯಂತ್ರಗಳ ತುತ್ತಾಗಿ ಮುಳುಗುವರು ಏಳದ ದುಃಖ ಕೂಪದಲ್ಲಿ! ರೂಪ ಹಣ ಆಸ್ತಿಗೆ ಮರುಳಾಗಿ ಸಂಸ್ಕಾರ ಗುಣ ಧರ್ಮ ಕಡೆಗಣಿಸಿ ಕೈ ಹಿಡಿದು ಒಳಗೊಳಗೆ ಕುದಿವರು, ಜಗಳ ಹೊಡೆ ಬಡೆದಾಡುವರು, ಬೇರೆಯಾಗುವರು, ಬಯಲ ಬೀಳುವರು, ಜೈಲು ಸೇರುವರು, ಪ್ರಾಣ ತೆರುವರು! ತನ್ನದಲ್ಲದರತ್ತ ಕೈ ಚಾಚುವನು, ಕದಿಯುವನು, ಸುಳ್ಳು ಹೇಳುವನು, ಲಂಚ ಬಾಚುವನು ಎತ್ತಿ ಹಾಕುವನು, ಒದೆ ಏಟು ಬೈಗುಳ ತಿನ್ನುವನು ಕೆಲಸ ಮಾನ ಅವಕಾಶ ಕಳಚುವುದು ಶಿಕ್ಷೆ ದುಃಖ ಬೆನ್ಹತ್ತಿ ಕಾಡುವುದು! ಅಶುಚಿ ಹಿತ ಮಿತವಲ್ಲದ ಭಕ್ಷಣೆ, ಕುಡಿತ ಇಂದ್ರಿಯ ದಾಸ್ಯ ಚಿಂತೆ ನಿದ್ರಾಹೀನತೆ ಸ್ನಾನ ಪೂಜಾದಿ ಸದಾಚಾರರಾಹಿತ್ಯ ಆರೋಗ್ಯ ನುಂಗುವುದು ನರಕ ದುಃಖವನ್ನುಣಿಸುವುದು! ಅರ್ಥೈಸಿಕೊಳ್ಳೆವು ಏಳಿಗೆ ಸಹಿಸೆವು ಆರೋಪ ಹೆಣೆವೆವು ದ್ವೇಷಕಾರುವೆವು ದುಃಖ ದಳ್ಳುರಿಯಲ್ಲಿ ಬೆಂದು ಕರಕಾಕುಗುವೆವು!
ಜಗವೇ ನಾವು ಎನ್ನೋಣ, ದುಃಖವ ದಾಟಿ ಸುಖಿಸೋಣ!!