
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ.
ಮೂಲವನ್ನು ಕಷ್ಟಪಟ್ಟು ರಕ್ಷಿಸಬೇಕು. ಟೊಂಗೆ ಒಣಗಿದರೆ, ಎಲೆ ಹಣ್ಣು ಹೂವು ಕಾಯಿ ಉದುರಿದರೆ ನಡೆದೀತು. ಬೇರೇ ಕೊಳೆತರೆ? ಇಡೀ ಮರವೇ ಸತ್ತಿತು! ಕಟ್ಟಡದಲ್ಲಿ ಕೆಲವು ಮಾರ್ಪಾಡು ಆಗಬಹುದು. ಅಡಿಪಾಯವೇ ಕುಸಿದರೆ? ಭೂಮಿಗೊರಗುವುದು ಭವ್ಯ ಭವನ!ನಾವಿಂದು ಹೆಮ್ಮರದಂತೆ ಬೆಳೆದಿರಬಹುದು. ಇದಕ್ಕೆಲ್ಲ ಕಾರಣ ನಮ್ಮ ಹಿರಿಯರು, ತಂದೆ ತಾಯಿ ಅಜ್ಜ ಅಜ್ಜಿಯರು! ಅವರು ಏನೆಲ್ಲ ಕಷ್ಟ ಸಹಿಸಿ ನಮಗೆ ಉಸಿರನ್ನು ನೀಡಿ ಬೆಳೆಸಿದರೆಂಬುದನ್ನು ಮರೆಯಲಾಗದು. ಹಿರಿಯರನ್ನು ಕಡೆಗಣಿಸಿದರೆ ಬುಡವಿಲ್ಲದ ಬದುಕು. ಚಿರಕಾಲ ಗೌರವ ಸುಖದಿಂದ ಬಾಳಲಾಗದು! ಇಂಥ ನಮ್ಮ ಸಂತತಿಗೂ ಇರದು ಭದ್ರ ಬುನಾದಿ! ಅರಿವಿನ ಬದುಕೆಂಬ ವೃಕ್ಷಕ್ಕೆ ಸಂಧ್ಯಾವಂದನೆ, ಪೂಜೆ ಜಪ ತಪಸ್ಸುಗಳೇ ಬೇರು. ವೇದಗಳು, ಜ್ಞಾನ ಬೋಧಕ ಗ್ರಂಥಗಳೇ ಟೊಂಗೆ. ಸತ್ಕಾರ್ಯಗಳೇ ಎಲೆಗಳು! ಪೂರ್ವಿಕರ ಗೌರವದಿ ನೆನೆಯೋಣ, ಎಳೆಯರಿಗೆ ಹಿರಿಯರೆನಿಸೋಣ!!
ವಿಪ್ರೋ ವೃಕ್ಷೋ ಮೂಲಕಾನ್ಯತ್ರ ಸಂಧ್ಯಾ.
ವೇದಃ ಶಾಖಾ ಧರ್ಮಕರ್ಮಾಣಿ ಪತ್ರಂ.
ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ.
ಛಿನ್ನೇ ಮೂಲೇ ನೈವ ವೃಕ್ಷೋ ನ ಶಾಖಾ.