
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು.
ಅಸಂಖ್ಯಾತ ವಿದ್ಯೆಗಳಲ್ಲಿ ಕೃಷಿಯೇ ಶ್ರೇಷ್ಠ. ಕೃಷಿ ನೀಡುವುದು ಅನ್ನ, ಅನ್ನ ಎಲ್ಲರಿಗೂ ಬೇಕು! ಭೂಮಿ ಬೀಜ ನೀರು ಗೊಬ್ಬರ ಬೆಳಕು ಆಕಾಶ ಗಾಳಿ ಕೃಷಿಗೆ ಮೂಲ. ಹೈನು ಗೊಬ್ಬರಕೆ ಪಶು ಪಕ್ಷಿ ಕ್ರಿಮಿ ಕೀಟ ಇಂಬು! ಹಣ್ಣು ನೀರಿಗೆ ವೃಕ್ಷಸಂಕುಲವೇ ಇಂಬು! ಇದು ಪ್ರಕೃತಿ, ದೈವದತ್ತ! ಕೃಷಿಕನಹೋ ದೈವಭಕ್ತ! ಸದಾ ಬೆವರಿಳಿಸಿ ದುಡಿವ ಯೋಗಿ! ಸುಳ್ಳು ಆಲಸ್ಯ ಲಂಚ ವಂಚನೆ ಅರಿಯದ ಮುಗ್ಧ! ಸಾವಯವ ಕೃಷಿ ಆಧಾರಿತ ಆಹಾರದ ಸತ್ತ್ವ, ಸ್ವಚ್ಛ ಪರಿಸರ, ನೀಡುವುದಾರೋಗ್ಯ ದೀರ್ಘ ಬಾಳು! ಆಧುನಿಕ ಸುಖೀಜೀವನಶೈಲಿ ಕೆಣಕಿದೆ ಕೃಷಿಕನ ನಿದ್ದೆಗೆಡಸಿದೆ. ಅನ್ಯರಂತಿಲ್ಲ ಅವನ ಆದಾಯ ಪ್ರಾಶಸ್ತ್ಯ! ರೈತನಿಂದು ಶೋಷಿತ ನಿರ್ಲಕ್ಷಿತ! ಹತಾಶನಾತ ಕೃಷಿ ತೊರೆಯುತ, ಹರಟೆ ಹೊಡೆಯುತ, ಚಟದಾಸನಾಗುತಲಿರುವ, ತನ್ನ ತಾ ಮಾರಿಕೊಳ್ಳುತಲಿರುವ! ಆತುರ ಲಾಭ ಇಳುವರಿಯಾಶೆಗೆ ರಾಸಾಯನಿಕ ಗೊಬ್ಬರದಿ ಬೆಳೆದು ವಿಷಾಹಾರವನಿಕ್ಕುತಲಿಹನು! ಇದು ಮುಂದುವರಿದರೆ ಹೀಗೆ ನಾಳೆ ಅನ್ನವೇ ನಮ್ಮನು ಕೊಲ್ಲುವುದು!
ಬದಲಾಗಲಿ ಎಮ್ಮಯ ಜೀವನ ಶೈಲಿ, ಕೃಷಿಕನ ಎತ್ತಿ ಮೆರೆಯೋಣ!!