ಆಮೇಲೆ ಕಚ್ಚಾಟ ಮೇಲು ಕೀಳೆಂದು

Share

 

                 ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
     ಆಮೇಲೆ ಕಚ್ಚಾಟ ಮೇಲು ಕೀಳೆಂದು.

ಕುವೆಂಪುರವರ ಈ ಮಾತು ಮಾರ್ಮಿಕ! ನಾನು ಈ ಜಾತಿಯವ. ನೀನು ಆ ಜಾತಿಯವ. ನನ್ನ ಜಾತಿ ಶ್ರೇಷ್ಠ. ನಿನ್ನ ಜಾತಿ ಕನಿಷ್ಠ. ನನ್ನ ಧರ್ಮ ಸರಿ. ನಿನ್ನದು ಧರ್ಮವೇ ಅಲ್ಲ. ನನ್ನ ದೇವರೇ ದೊಡ್ಡವ! ಹೀಗೆ ನಡೆದಿದೆ ವಾದ ದ್ವೇಷ ರಕ್ತಪಾತ! ಬ್ರಾಹ್ಮಣನು ಹುಟ್ಟುವಾಗ ಜನಿವಾರವಿಲ್ಲ. ಲಿಂಗಾಯತ ಹುಟ್ಟುವಾಗ ಲಿಂಗ ಶಿವದಾರವಿಲ್ಲ. ಕ್ರೈಸ್ತ ಮುಸ್ಲಿಂ ಯಾರೇ ಆಗಲಿ ಹುಟ್ಟುವಾಗ ಎಲ್ಲ ಬೆತ್ತಲೆ! ದೇಹ ಅಂಗಾಂಗ ರಕ್ತ ಆಶೆ ಆಕಾಂಕ್ಷೆ ಭೂಮಿ ಆಕಾಶ ಗಾಳಿ ಜಲ ಬೆಂಕಿ ಸೂರ್ಯ ಎಲ್ಲರಿಗೂ ಸಮ! ಅನೇಕ ವಸ್ತು ವ್ಯಕ್ತಿ ಗುಣ ಕರ್ಮಗಳಲ್ಲಿರುವ ಏಕಪ್ರಕಾರತೆ ಜಾತಿ. ಅದು ಹುಟ್ಟಿನಿಂದ ಅಳೆಯುವುದಲ್ಲ. ಮಾತು ಮನ ಕ್ರಿಯೆಗಳಲ್ಲಿ ಹೊಲಸಾಗಿರುವವ, ಹೊಲಸು ತಿನ್ನುವವ-ಕುಡಿಯುವವ ಯಾರಾದರೂ ಅವ ಹೊಲೆಯ! ಮಾತು ಮನ ಕ್ರಿಯೆಗಳಲ್ಲಿ ಒಳಿತಾಗಿರುವವ ಒಳಿತನು ತಿನ್ನುವ – ಕುಡಿಯುವವ ಯಾರಾದರೂ ಅವ ಬ್ರಾಹ್ಮಣ ಲಿಂಗಾಯತ ಮತ್ತೊಬ್ಬ! ಪ್ರತಿ ದೇಹ ದೇವಾಲಯ. ಪ್ರತಿ ಜೀವಿ ಪರಮಾತ್ಮಾ. ದೇವನಿರ್ಮಿತ ದೇಹದೇಗುಲ ಸ್ವಚ್ಛ ಪವಿತ್ರವಾಗಿರಲಿ. ದೇಹವ್ಯಾಪಿ ಚೈತನ್ಯ ಪರಮಾತ್ಮನ ಇರವು ಮಹಿಮೆಗಳನರಿಯಲಿ. ಆಗ ಬದುಕು ಬಂಗಾರ! ಅಲ್ಲಿ ಮೇಲಿಲ್ಲ ಕೀಳಿಲ್ಲ ಕಚ್ಚಾಟವಿನಿತಿಲ್ಲ! ಜಾತಿ ಧರ್ಮ ದೇವರು ನಮ್ಮ ಬುದ್ಧಿ ಕಲ್ಪನೆಯ ಕೂಸುಗಳು! ಚರ್ಚ್ ಮಸೀದಿ ಮಂದಿರ ವಿಗ್ರಹಗಳು ನಮ್ಮ ನಿರ್ಮಾಣ!
ಭೇದ ದ್ವೇಷವನಳಿಯೋಣ, ನಾವು ಒಂದೇ ಎನ್ನೋಣ!!

Girl in a jacket
error: Content is protected !!