ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ :
ಅಕ್ಕಿ ಮೇಲೆ ಆಶೆ, ನೆಂಟರ ಮೇಲೆ ಪ್ರೀತಿ.
ಸಮಾರಂಭ ಸತ್ಕಾರಗಳು ಅದ್ದೂರಿಯಾಗಬೇಕು, ಹೆಚ್ಚು ಜನ ಸೇರಬೇಕು, ಅಲ್ಲಿ ತಾ ಮಿಂಚಬೇಕು, ಇದು ಜನರ ಆಶೆ. ಇದಕೆ ಶ್ರಮಪಡಬೇಕು, ಖರ್ಚು ಮಾಡಬೇಕು. ಶ್ರಮ ಪಡೆ, ಖರ್ಚು ಮಾಡೆ, ಎಂದರೆ ಆಶೆ ಪ್ರೀತಿ ತೊರೆಯಬೇಕು. ಸರಳಕ್ಕೆ ಶರಣಾದರೆ ಸಾಲದ ಶೂಲವಿಲ್ಲ. ನೆಂಟರಿಷ್ಟರೆಂದಾದರೆ ಧಾರಾಳತನದಿ ಉಣಿಸಿ ಉಪಚರಿಸಿ ಖುಷಿಪಡಿಸಿ. ಅಕ್ಕಿ ವಗೈರೆ ಉಳಿಸಿ ಖುಷಿಪಡಿಸಲಾಗದು. ವಧುವರರಿಗೆ ಆಶೀರ್ವದಿಸಿ ಹಾಕಲಾದರೂ ಅಕ್ಷತೆ ಅಕ್ಕಿ ಬೇಕಲ್ಲ! ಅಷ್ಟನ್ನೂ ಕಳಕೊಳ್ಳದಂತಿದ್ದರೆ ಮದುವೆ ಎಂಥದ್ದು? ಒಂದು ಪಡೆಯಲು ಒಂದು ಕಳೆಯಬೇಕು. ಹಣ ಕೊಟ್ಟು ವಸ್ತು ಪಡೆವಂತೆ. ಕಳೆದುಕೊಳ್ಳುವ ಮನವಿಲ್ಲದಿರೆ ಪಡೆದುಕೊಳ್ಳುವ ಆಶೆ ಏಕೆ? ಪ್ರಸಿದ್ಧ ಶ್ರೀಮಂತ ಮಂತ್ರಿ ಮಗಳ ಮದುವೆಗೆ ಜಾಹೀರಾತು ಆಮಂತ್ರಣದಿ ಸೇರಿದ ಸಾವಿರಾರು ಸ್ವಾಮಿಗಳು ಪ್ರಸಾದ ತಾಂಬೂಲವಿಲ್ಲದೇ ಹಿಂದಿರುಗಿದ್ದುಂಟು! ಶ್ರಮ ಖರ್ಚು ಮಾಡೋಣ, ಸಂಭ್ರಮಿಸಿ ಮೆರೆಯೋಣ!!