
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ.
ಎನಗಿಂತ ಕಿರಿಯರಿಲ್ಲ ಎನ್ನುವ ವಿನಮ್ರರು ವಿರಳ. ಎನಗಿಂತ ಹಿರಿಯರಿಲ್ಲ. ಎನ್ನ ಸಮನಾರು? ಎಂದು ಅಹಮಿಕೆ ಬೀಗುವ ಜನರಧಿಕ! ತನ್ನ ತನ್ನವರ ಅಲ್ಪ ಸಾಧನೆಯನ್ನು ಉಬ್ಬಿಸುವರಿಂತು:ತುರ್ತು ವಾಹನಕ್ಕೆ ಕರೆ ಮಾಡಿ ಕಳಿಸಿದೆ ಬದುಕಿದ. ಇಲ್ಲದಿರೆ ಆತನ ಸಾವು ಖಚಿತ! ಅವನಿಗೆ ಸಾವಿರ ಕೊಟ್ಟು ಓದಿಸಿದೆ. ಇಲ್ಲದಿರೆ ಆತ ಅಧಿಕಾರಶೂನ್ಯ! ಹೆಜ್ಜೆ ಹೆಜ್ಜೆಗೂ ಕೇಳುವುದು, ಲೆಕ್ಕವಿಲ್ಲದ ಈ ಮಾತು! ಜಾತ್ರೆ ಕಾರ್ಯಕ್ರಮಗಳ ಪತ್ರಿಕೆ ಬ್ಯಾನರ್ ಗಳಲ್ಲಿ ದೇವರು – ಮುಖ್ಯಸ್ಥರ ಚಿತ್ರದ ಕೈ ಕಾಲು ತಲೆ ತೊಡೆ ಎದೆ ಎಲ್ಲೆಂದರಲ್ಲಿ ಕಾಣುವುದು ಅಸಂಖ್ಯ ಮುಖಚಿತ್ರ! ರುಂಡ ಮಾಲೆಯ ತೆರದ ಮಾಟ! ಕೀಳು ಪ್ರಚಾರದ ಚಟದಾಸರಿವರು! ಡಿವಿಜಿ ಹೇಳುವರು :ಭೂಮಿಯಲ್ಲಿನ ಬೀಜ ಮೊಳಕೆಯೊಡೆಯುವಾಗ ತಮಟೆ ಇಲ್ಲ!ಕಾಯಿ ಹಣ್ಣಾಗುವಾಗ ತುತ್ತೂರಿ ಇಲ್ಲ! ಜಗಕೆ ಬೆಳಕ ನೀಡುವ ಸೂರ್ಯ ಚಂದ್ರರದು ಒಂದಿನಿತೂ ಸದ್ದಿಲ್ಲ! ಆ ಮಹಾ ಸಾಧನೆಗಳ ಮುಂದೆ ನಿನ್ನದಾವ ಸಾಧನೆ? ಬಡಾಯಿ ಡಂಗುರವೇಕೆ? ಬಾಯ್ಮುಚ್ಚಿ ಸುಮ್ಮನಿದ್ದು, ಜಗದ ಹಿರಿ ಸಾಧನೆಗೆ ತಲೆ ಬಾಗಿ ಹೊಗಳು! – ಎಂದು.
ಸಾಧನೆಗೈಯ್ಯೋಣ! ಅಹಂಕಾರವ ಅಳಿಯೋಣ!!