
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ.
ಸಾವೆಂದರೆ ಭಯ! ತಪ್ಪಿಸಲಾಗದು! ಉತ್ತಮ ಆರೋಗ್ಯ ಎಚ್ಚರಿಕೆಯಿಂದ ಮುಂದಕ್ಕೆ ತಳ್ಳಬಹುದಷ್ಟೇ! ನಿದ್ರೆ ಪ್ರತಿದಿನದ ಪ್ರಾಯೋಗಿಕ ಸಾವು! ಅದಕ್ಕೆ ಭಯ ಅಳುವು ಬೇಡ. ಅದು ಕಬಳಿಸುವ ಮೊದಲು ನಾವೇ ಅದಕ್ಕೆ ಕಾಯೋಣ! ಊರಿಗೆ ಹೊರಡಲು ಸಿದ್ಧರಾಗಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಂತೆ, ಬಸ್ ಬರುತ್ತಲೇ ಉತ್ಸಾಹದಿಂದ ಬಸ್ ಹತ್ತಲು ಮುನ್ನುಗ್ಗುವಂತೆ! ಇದಕ್ಕೆ ಬೇಕು ಶಿಸ್ತಿನ ಬದುಕು. ಅಗತ್ಯ ಕೆಲಸ ಸಣ್ಣದೋ ದೊಡ್ಡದೋ, ಎಲ್ಲ ಪವಿತ್ರ. ಅಲ್ಲಿಲ್ಲ ಮೇಲು ಕೀಳು! ಒದಗಿ ಬಂದ ಕರ್ತವ್ಯದಲ್ಲಿ ಇರಲಿ ಶ್ರದ್ಧೆ, ಮನಃಪೂರ್ವಕ ಪ್ರೀತಿ. ಬೆವರಿನ ದುಡಿಮೆಗೆ ಸಂದ ಫಲ ಅಂಬಲಿಯಾದರೂ ಅದು ಭಗವಂತ ನೀಡಿದ ಜೀವಾಮೃತ! ಧರ್ಮ ಅಧ್ಯಾತ್ಮವಿರೋಧವೆನಿಸದ ಕರ್ತವ್ಯ ಹೊಣೆಗಾರಿಕೆ ಇರಲಿ. ಶ್ರೀ ಹರ್ಷನ ನಾಗಾನಂದ ನಾಟಕದ ಜೀಮೂತಕೇತುವಿನ ಮಾತಿದು:ಯೌವನ ಸುಖ ಅನುಭವಿಸಿದೆ. ಕೀರ್ತಿ ಹರಡಿದೆ. ಸುಭದ್ರ ರಾಜ್ಯ ಆಳಿದೆ. ತಪಸ್ಸು ಮಾಡಿದೆ. ಪ್ರಶಂಸನೀಯ ಮಗ, ಮನೆಗೆ ತಕ್ಕ ಸೊಸೆ! ಇನ್ನೇನಿದೆ? ಧನ್ಯ ನಾನು! ಸಾವಿಗಾಗಿ ಕಾದಿರುವೆ! ನಮ್ಮ ಬಾಳು ಇಂತಿರಲಿ!!