ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹುಟ್ಟು ಗುಣ ಸುಟ್ಟರೂ ಹೋಗದು.
ವ್ಯಕ್ತಿ ವಸ್ತು ಜೀವಿಯ ಬಾಲ್ಯ ಆರಂಭದ ಗುಣ ಸ್ವಭಾವ ಸುಟ್ಟರೂ ಏನೇ ಮಾಡಿದರೂ ಬದಲಾಗದು. ಮಾಂಸ ಮುಟ್ಟುವುದಿಲ್ಲ ಎಂಬ ಷರತ್ತು ಒಪ್ಪಿ ದೇವರ ಅನುಗ್ರಹದಿಂದ ನಾಯಿ ರಾಜನಾಗಿ ಸಿಂಹಾಸನ ಏರಿತಂತೆ! ಸಭೆ ನಡೆಯುತ್ತಿರಲು ಮೂಳೆ ಕಂಡೊಡನೆ ಮಾತು ಮರೆತ ನಾಯಿ ಸಿಂಹಾಸನದಿಂದ ಜಿಗಿದು ಮೂಳೆ ಕಚ್ಚಿತಂತೆ! ಹಾಗೆಂದು ಆರಂಭಿಕ ಗುಣ ಸ್ವಭಾವ ಪರಿವರ್ತನೆ ಅಸಾಧ್ಯವೆಂದಲ್ಲ.ಹಾಗಿದ್ದಲ್ಲಿ ಶಿಕ್ಷಣ ತರಬೇತಿಯ ಅಗತ್ಯ ಏನು? ಸುಲಿಗೆ ದರೋಡೆ ಮಾಡುತ್ತಿದ್ದ ಕೌಶಿಕ, ನಾರದರ ಉಪದೇಶದಿಂದ ಮಹರ್ಷಿ ವಾಲ್ಮೀಕಿ ಆಗಲಿಲ್ಲವೇ? ಕೊಲೆಗಡುಕ ಅಂಗುಲಿಮಾಲಾ ಬುದ್ಧನ ಉಪದೇಶದಿಂದ ಬದಲಾಗಲಿಲ್ಲವೇ? ನವಕೋಟಿ ಒಡೆಯ ತಿಮ್ಮಪ್ಪ ಪುರಂಧರದಾಸನಾಗಲಿಲ್ಲವೇ? ಆದರೆ ನೆನಪಿರಲಿ :ಜೀವನದ ಬಾಲ್ಯ, ಏನೂ ಅಂಟದ ಪವಿತ್ರ ಖಾಲಿ ಪಾತ್ರೆ! ಆಗ ತುಂಬುವ ಸಂಸ್ಕಾರ ಸುಭದ್ರ ಸುಲಭ! ಆಗ ಕುಸಂಸ್ಕಾರ ತುಂಬಿದರೆ, ಅದನ್ನು ಕಿತ್ತಿ ತೊಳೆದು ಹೊಸ ಸುಸಂಸ್ಕಾರ ತುಂಬಲು ಪಡಬೇಕು ಹರಸಾಹಸ! ಹುಳಿ ಮಾವು ಸಿಹಿಯಾಗುವುದು ಪ್ರಕೃತಿ! ನಿಸರ್ಗ ದೈವಕ್ಕೆ ಅಸಾಧ್ಯ ಏನು?
ಅಮೂಲ್ಯ ಬಾಲ್ಯ ಎನ್ನೋಣ, ಶ್ರೇಷ್ಠವ ಕಲಿತು ಕಲಿಸೋಣ!!