ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹಿರಿಯರಿಲ್ಲದ ಮನೆ ಮನೆಯಲ್ಲ.
ಮನೆ = ಸಮಾಜದ ಪ್ರಾಥಮಿಕ ಘಟಕ. ತಂದೆ ತಾಯಿ, ಗಂಡ ಹೆಂಡತಿ, ಮಕ್ಕಳು ಮೊಮ್ಮಕ್ಕಳು, ಅಜ್ಜ ಅಜ್ಜಿ, ಸಹೋದರ ಸಹೋದರಿ ಮುಂತಾದವರ ನೆಲೆ. ಅವಿಭಕ್ತ ಕುಟುಂಬದಲ್ಲಿ ಕಾಣಸಿಗುವ ಸುಮಧುರ ಸಂಬಂಧಗಳನ್ನು, ಸುಂದರ ಬಾಳನ್ನು ಭಾವಿಸಿ! ಹಿರಿಯರು ಕಿರಿಯರನ್ನು ಹುಟ್ಟುಹಾಕುವರು, ತುತ್ತು ನೀಡುವರು, ನಡೆ ನುಡಿಗಲಿಸಿ, ಕಾಲ ಕಾಲಕ್ಕೆ ಪಡೆವ ಬಾಳಿನ ಸಿಹಿ ಕಹಿ ಅನುಭವದ ರಸಪಾಕ ಹರಿಸುವರು! ಕಿರಿಯರು ಹಿರಿಯರ ನೋಡಿ ಕೇಳಿ ಮಾಡಿ ಕಲಿವರು! ಕಲ್ಲಿಗೆ ಶಿಲ್ಪಿಯ ಉಳಿ ಏಟು ಬಿದ್ದಂತೆ, ಶಿಲೆ ಸುಂದರ ಮೂರ್ತಿಯಾಗುವಂತೆ, ಬದುಕು ರೂಪುಗೊಳ್ಳುವುದು!ಒಬ್ಬರಿಗೊಬ್ಬರ ಸಹಾಯ ಸಹಕಾರ ಮಾರ್ಗದರ್ಶನ ಹರಿದು ಬರುವುದು! ಅಜ್ಜ ಅಜ್ಜಿಯರ ಕಥೆ ಬಿತ್ತುವುದು ಹೃದಯ ಹೊಲದಲ್ಲಿ ಸುಂದರ ಸಂಸ್ಕಾರ! ಕಿರಿಯರು ಹಿರಿಯರ ಸೇವೆ ಮಾಡುವರು. ಹಿರಿಯರ ಸೇವೆ ಮಾರ್ಗದರ್ಶನಗಳು ಕಿರಿ ಕಿರಿ ಎಂದವರ ಮನೆ ಮನ ಛಿದ್ರ, ಬಾಳು ಗೋಳಿನ ಕತ್ತಲೆ! ಪೋಷಕರು ವೃದ್ಧಾಶ್ರಮ – ಬೀದಿಪಾಲು, ಮಾಡಿದ್ದುಣ್ಣೋ ಮಹಾರಾಯ, ಬಿತ್ತಿದ್ದನ್ನು ಬೆಳಕೋ ಎಂಬಂತೆ ನಾಳೆ ತನಗೇ ಈ ದುರ್ಗತಿ ತಿರುವು ಮುರುವು! ಗುರು ಇಲ್ಲದ ಮಠ ಮಠವಲ್ಲ, ದೇವರಿಲ್ಲದ ಗುಡಿ ಗುಡಿಯಲ್ಲ!
ಗುರು ದೇವರ ನಮಿಸೋಣ, ಹಿರಿಯರ ಸೇವೆಯ ಮಾಡೋಣ!!