ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ.
ಅಕ್ಷಿ=ಕಣ್ಣು. ಸಾಕ್ಷಿ=ಪ್ರತ್ಯಕ್ಷದರ್ಶಿ. ಘಟನೆಯಲ್ಲಿ ಭಾಗಿಯಾಗದ ಪ್ರತ್ಯಕ್ಷದರ್ಶಿ, ರಾಗ ದ್ವೇಷ ಪಕ್ಷಪಾತರಹಿತ, ಯಥಾವತ್ತಾಗಿ ನುಡಿಯುವಾತ ನಿಜ ಸಾಕ್ಷಿ. ಸತ್ಯ ಸುಳ್ಳೆಂಬ ವ್ಯಾಜ್ಯ ತೀರ್ಪಿಗೆ ಬೇಕು ಬಲಸಾಕ್ಷಿ! ಸಾಕ್ಷಿ ಹೆದರಿ, ಕೈಯೊಡ್ಡಿ ಶಾಮೀಲಾಗಿ ತಿರುಗಿಬಿದ್ದರೆ ನ್ಯಾಯ ಸತ್ತಿತು! ಅಷ್ಟು ಕೊಟ್ಟರೆ ಅವರಂತೆ, ಇಷ್ಟು ಕೊಟ್ಟರೆ ಇವರಂತೆ ಹೇಳುವ ಹಿರಿಯರು ಸಾಕ್ಷಿಗಳು ಜಗದಗಲ! ಕಳ್ಳನ ಬಿಡಿಸಲು, ಇವನಲ್ಲ ಕಳ್ಳ ಎಂದು ಕಳ್ಳ ನುಡಿಯುವನು ಸಾಕ್ಷಿ! ಹಾಗಲಕಾಯಿ ಕಹಿಯಲ್ಲವೆಂದು ಬೇವಿನಕಾಯಿ ಸಾಕ್ಷಿ ನುಡಿಯಿತಂತೆ! ಅವರಂಥವರಿಗೆ ಅವರಂತವರೇ ಸಾಕ್ಷಿ! ಸುಳ್ಳು ಸಾಕ್ಷಿಗೆ ಸತ್ಯದ ಲೇಪನ, ನಡೆದಿದೆ ಸಾಕ್ಷಿಯ ದುರ್ಬಳಕೆ. ಸತ್ಯ ಸೂರ್ಯನಷ್ಟೇ ಸ್ಪಷ್ಟವಿದ್ದರೂ ಪ್ರತಿಸಾಕ್ಷಿ ಪ್ರತಿಕೂಲ ಸಾಕ್ಷಿಗಳಿಂದ ಸಾಕ್ಷಿ ಮಂಕಾಗಿ, ನ್ಯಾಯ ನೆಲಕಚ್ಚಿ, ಅನ್ಯಾಯ ಜಯಗಳಿಸಿ ಕೇಕೆಗೈಯ್ಯುವುದು! ಬಿಹಾರದ ಲಕ್ಷ್ಮಣಪುರ ಬಾತೆಯ 58 ಜನ ದಲಿತಹತ್ಯಾ ಪ್ರಕರಣದಲ್ಲಿ ಕೆಳನ್ಯಾಯಾಲಯ ಶಿಕ್ಷೆ ವಿಧಿಸಿತು. ಪ್ರತ್ಯಕ್ಷದರ್ಶಿಗಳು ಸಾವಾದವರ ಸಂಬಂಧಿಕರು ಸಾಕ್ಷಿಯಾಗರೆಂದ ಹೈಕೋರ್ಟ್, ಆ ತೀರ್ಪು ವಜಾಗೊಳಿಸಿ ಆರೋಪಿಖುಲಾಸೆ ಮಾಡಿತು! ಕಂಬಾಲಪಲ್ಲಿಯ 8 ಜನ ದಲಿತಹತ್ಯಾಕಾಂಡದ ಸಾಕ್ಷಿಗಳು ಹೆದರಿ, ಆಮಿಷಕ್ಕೊಳಗಾಗಿ ಪ್ರತಿಕೂಲಸಾಕ್ಷಿಗಳಾಗಿ ಆರೋಪಿಗಳ ಖುಲಾಸೆ! ಹೆಣವಾಗಿ ಹೋಗುವ, ಅಲ್ಪಕಾಲದ ಬಾಳಿನ ಸ್ವಾರ್ಥದ ಕ್ಷಣಿಕ ಸುಖಕ್ಕಾಗಿ ಹೆಣ-ಹೆಣರಾಶಿಗಳ ಮೇಲೆ ಕುಳಿತು ಕುಡಿದು ತಿಂದು ತೇಗುವ ಬದುಕೇಕೆ?
ಸತ್ಯ ಸಾಕ್ಷಿಗಳಾಗೋಣ, ನಿರ್ವಂಚನೆಯಿಂದಲಿ ಬಾಳೋಣ!!