
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ.
ಬಾಳು ಮಾಗಿದಂತೆ ಸಂಬಂಧ ಶಿಥಿಲ. ಹೊಸತರಲ್ಲಿ ಅದು ಎಳೆ ಸೂಕ್ಷ್ಮ. ಬಲಿತಂತೆ ಗಟ್ಟಿ. ಮಾಗಿದಂತೆ ಸಡಿಲು! ಹೂ ಮಿಡಿ ಕಾಯಿ ಹಣ್ಣು ಮುಟ್ಟಿ ಕಿತ್ತಿ ನೋಡಿ! ಪಕ್ವ ಹಣ್ಣು ತಂತಾನೇ ಭೂಮಿಗೊರಗುವುದು! ಇಷ್ಟಪಟ್ಟ ಪುಸ್ತಕ ಓದುತ್ತ ಮಲಗಿದಾತನ ಕೈ ಮಲಗುವುದು! ಪುಸ್ತಕ ಕಳಚುವುದು! ಕಾಲ ಪಕ್ವವಾಗುತ್ತಲೇ ಸ್ತ್ರೀ ಪುರುಷ ಕುಟುಂಬ ಸಮಾಜ ಸಂಬಂಧಗಳು ಕಳಚುವವು, ಹಳಸುವವು! ಸಂಕಲ್ಪ ಗೊತ್ತು ಗುರಿಗಳು ಕದಲುವವು! ಗಂಡ ಸಾಯುವನು, ಹೆಂಡತಿ ಕೈ ಬಿಡುವಳು, ಮಗ ಹೊರದಬ್ಬುವನು, ಮಿತ್ರ ಶತ್ರುವಾಗುವನು, ಬಂಧು ಅವಮಾನಿಸುವನು, ಅಪರಿಚ ಹಿಡಿದೆತ್ತಿ ಸಲಹುವನು! ಈ ಅರಿವಿದ್ದರೆ ದುರಾಶೆ ಅತಿ ಸ್ವಾರ್ಥ ಇರದು. ಉದಾರತೆ ಮನೆ ಮಾಡುವುದು. ಲಂಚ ವಂಚನೆ ಮೋಸ ಸುಳ್ಳು ದರೋಡೆ ಕೊಲೆ ಸುಲಿಗೆ ನಿಲ್ಲುವವು. ಪ್ರೀತಿ ವಿಶ್ವಾಸ ಸ್ನೇಹ ಭಕ್ತಿ ಗೌರವ ತ್ಯಾಗ ಸಂವರ್ಧಿಸುವವು! ಬಾಳು ಬಂಗಾರ! ಸಂಬಂಧ ಇರದೆಯೂ ಇರಲಾಗದು. ಇರಬೇಕು, ಇದ್ದೂ ಇರದಂತಿರಬೇಕು!
ವಾಸ್ತವ ಅರಿಯೋಣ, ಸಹಜ ಭಾವದಿ ಉಳಿಯೋಣ!!