
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ:
ಶರೀರಮಾಧ್ಯಂ ಖಲು ಧರ್ಮಸಾಧನಂ.
ಶಿವನನ್ನು ಒಲಿಸಿಕೊಳ್ಳಲು ಪರ್ವತರಾಜಕುಮಾರೀ ಪಾರ್ವತೀ ಕಠಿಣ ತಪೋಮಗ್ನಳಾಗಿ ಶರೀರವನ್ನು ದಂಡಿಸಿದ್ದನ್ನು ಕಂಡ ಶಿವನ ಮಾರುವೇಷದ ಬ್ರಹ್ಮಚಾರಿಯು ಪಾರ್ವತಿಗೆ ಹೇಳಿದ ಮಾತಿದು. ಶರೀರವು ಧರ್ಮಸಾಧನೆಗೆ ಮೂಲಾಧಾರ.ಅದನ್ನು ಚೆನ್ನಾಗಿ ಸಂರಕ್ಷಿಸಬೇಕು! ಶರೀರದಲ್ಲಿನ ಕಣ್ಣು ಕಿವಿ ಮೂಗು ಬಾಯಿ ಗುಪ್ತೇಂದ್ರಿಯ ಕೈ ಕಾಲು ಅವುಗಳ ಬೆರಳುಗಳನ್ನು,ಜೀವ ಮೆದುಳು ಹೃದಯ ಶ್ವಾಸಕೋಶ ಅನ್ನನಾಳ ಯಕೃತ್ ದೊಡ್ಡಕರುಳು ಸಣ್ಣಕರುಳು ಮೂತ್ರಕೋಶ ನರಮಂಡಲಗಳನ್ನು ಗಮನಿಸಿ. ಎಂಥ ಅದ್ಭುತ! ಇವನ್ನು ತಂದೆ ತಾಯಿ ಮಾಡಲಾರರು. ಇದು ಪ್ರಕೃತಿದೇವರ ವರಕೊಡುಗೆ. ಇದನ್ನು ಆರೋಗ್ಯವಾಗಿರಿಸಿಕೊಳ್ಳೋಣ. ಅಂತರಂಗದ ತೃಪ್ತಿಗಾಗಿ ಜ್ಞಾನಸಾಧನೆಗೆ,ಬಹಿರಂಗದ ಬದುಕಿಗಾಗಿ ದುಡಿಮೆಗೆ, ಇನ್ನೊಬ್ಬರ ಬದುಕಿಗೆ ಹಿಂಸೆ ನೀಡದೇ, ಸಮಾಜದ ಮತ್ತು ಪ್ರಕೃತಿಯ ಹಿತಕ್ಕಾಗಿ ಬಳಕೆಮಾಡೋಣ!!
*ಅಪಿ ಕ್ರಿಯಾರ್ಥಂ ಸುಲಭಂ ಸಮಿತ್ಕುಶಂ*
*ಜಲಾನ್ಯಪಿ ಸ್ನಾನವಿಧಿಕ್ಷಮಾಣಿ ತೇ||*
*ಅಪಿ ಸ್ವಶಕ್ತ್ಯಾ ತಪಸಿ ಪ್ರವರ್ತಸೇ|*
*ಶರೀರಮಾಧ್ಯಂ ಖಲು ಧರ್ಮಸಾಧನಮ್||*