ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಶರಣರ ಬಾಳು, ಮರಣದಲ್ಲಿ ಕಾಣು.
ಶರಣ=ಲಿಂಗ ಪರಮಾತ್ಮ ಗುರು ಹಿರಿಯರಿಗೆ ಬಾಗಿದ, ಸಾಧು ಸಜ್ಜನ ನ್ಯಾಯಮಾರ್ಗದ ಸಾತ್ತ್ವಿಕ. ಶರಣರ ಮಹಾತ್ಮ್ಯ ಅವರ ಅಂತ್ಯದಲ್ಲಿ ಗೋಚರ! ಮರಣಕ್ಕಂಜರು, ಸಂತಸದಿ ಸ್ವಾಗತಿಸುವರು. ಮರಣ ಬಹುತೇಕ ಸುಖಾಂತ್ಯ! ಜನ ಸೇರುವರು ಅಸಂಖ್ಯ! ಪಾರ್ಥಿವ ಶರೀರದ ಗೌರವ ಮೆರವಣಿಗೆ! “ಪುಣ್ಯಾತ್ಮ ಅಮರ! ಇರಬೇಕಿತ್ತು, ಇನ್ನೂ ಜನಕಲ್ಯಾಣ!ಮತ್ತೆ ಹುಟ್ಟಿ ಬರಲಿ” ಎಂದು ಜನರುದ್ಗಾರ! ದುರ್ಜನರ ಮರಣ ಬಹುತೇಕ ದುಃಖಾಂತ್ಯ,ಭೀಕರ! ಹೆಣ ಹೊರಲು ಜನ ಸಿಗರು. “ಪಾಪಿ ಸತ್ತಿದ್ದು ಒಳಿತಾಯಿತು! ಇದ್ದರೆ ಮತ್ತೂ ಗಂಡಾಂತರ!” ಎಂದು ಜನಶಾಪ, ನಿಟ್ಟುಸಿರು! ಪ್ರಾಣ ಹೋಗುವುದು ಗುದ ಗುಹ್ಯ ಬಾಯಿ ಕಿವಿ ಕಣ್ಣು ಬ್ರಹ್ಮರಂಧ್ರದಲಿ. ಸಾಮಾನ್ಯರದು ಅಧೋಮುಖ, ಉತ್ತಮರದು ಊರ್ಧ್ವಮುಖ. ಶರಣ ಬ್ರಹ್ಮಜ್ಞಾನಿ ನೈಷ್ಠಿಕ ಬ್ರಹ್ಮಚರ್ಯದ ಯೋಗಿಯ ಪ್ರಾಣ, ತಲೆಯ ಸುಳಿಯ ಬ್ರಹ್ಮರಂಧ್ರವನು ಭೇದಿಸಿ ಹೋಗುವುದು! ಅದು ಒಂದು ಇಲ್ಲವೇ ಹಲವು ಮಾರ್ಗಗಳಲ್ಲಿ ಹೋಗಬಹುದು. ಆ ಮಾರ್ಗವ ಗುರುತಿಸಬಹುದು.ಪ್ರಲೋಭನೆಯ ಸ್ತ್ರೀ ಸಿದ್ಧಾರೂಢರಿಗೆ ವಿಷ ಇಕ್ಕಿದಳು! ಹದಿನೈದು ದಿನ ಹಾಸಿಗೆ ಹಿಡಿದರೂ ಆರೂಢರ ಮುಖ ಮಂದಸ್ಮಿತ! ಓಂ ನಮಃ ಶಿವಾಯ ಜಪಿಸಿ ಮೃತ್ಯು ಗೆದ್ದರು! ಗಂಟಲು ಕ್ಯಾನ್ಸರ್ ಆಗಿ ಹಾಸಿಗೆ ಹಿಡಿದ ರಾಮಕೃಷ್ಣ ಪರಮಹಂಸರು ಜನವರಿ ಒಂದರಂದು ಹೊರಬಂದು ಸಂತಸದಿ ಮಾತನಾಡಿ ಭಕ್ತರನ್ನು ಹರಸಿದರು! ಸ್ವಾಮಿ ವಿವೇಕಾನಂದರು ದೇಹಬಿಡುವ ಮುನ್ನಾ ದಿನ ಶಿಷ್ಯರಿಗೆ ಪಾಣಿನಿಯ ಸಂಸ್ಕೃತ ವ್ಯಾಕರಣ ಬೋಧಿಸಿದರು!
ಶರಣರಾಗೋಣ, ಮರಣದ ಆಚೆಗೂ ಬದುಕೋಣ!!