
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ವಿಭೂತಿ
ವಿಭೂತಿ ಸುಟ್ಟ ಭಸ್ಮ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಬಹುತೇಕ ಎಲ್ಲ ಹಿಂದುಗಳು ಧರಿಸುವ ಪವಿತ್ರ ದ್ರವ್ಯ. ತ್ಯಾಗೀಶ್ವರ ಶಿವ ಸಂಹಾರ ನಾಶ ಭಸ್ಮಕರ್ತಾ! ಸ್ಮಶಾನವಾಸಿ ಸರ್ವಾಂಗ ಭಸ್ಮಲೇಪಿತ! ತಪೋನಿಷ್ಠ ಶಿವನ ಮನಸ್ಸನ್ನು ಚಂಚಲಗೊಳಿಸಿದ ಮನ್ಮಥನನ್ನು ಶಿವ ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ! ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ರಾಕ್ಷಸರು ಬ್ರಹ್ಮನ ವರ ಪಡೆದು ಬಂಗಾರ ಬೆಳ್ಳಿ ಕಬ್ಬಿಣದ ಮೂರು ನಗರ ನಿರ್ಮಿಸಿ ಸಾವಿರ ವರ್ಷ ಕಾಲ ಭೂಮಿ ಸುತ್ತುತ್ತ ಮೂರು ಲೋಕಗಳ ಮೇಲೆ ದೌರ್ಜನ್ಯ ಆಕ್ರಮಣದ ಲಗ್ಗೆ ಇಡಲು, ಶಿವನು ತ್ರಿಪುರವ ಸಂಹರಿಸಿ ದಹಿಸಿ ಭಸ್ಮಿಸಿದ! ವಸ್ತು ಶವ ಸುಟ್ಟ ಭಸ್ಮ ತ್ಯಾಗ ವೈರಾಗ್ಯ ಸಂಕೇತ! ಅಲ್ಲಿಲ್ಲ ಹಿರಿ ಕಿರಿ ಜಾತಿ ಸಿರಿತನ ಬಡತನದ ಭೇದ! ಭಸ್ಮ ಬದುಕ ನಶ್ವರತೆಯ ಉದ್ಬೋಧಕ ಪರವಸ್ತು!ಶಿವನ ವರ ಪ್ರಸಾದ. ಮಹಾಮಹಿಮೆ. ಶಿವ ನೀಡಿದ ಭಸ್ಮದ ತೂಕಕ್ಕೆ ಪಾರ್ವತಿಗೆ ಬಂಗಾರ ನೀಡಲು ಕುಬೇರ ಸೋತು ಹೋದ! ಖಜಾನೆಯ ಬಂಗಾರವೆಲ್ಲ ಸರಿದೂಗಲಿಲ್ಲ! ಭೋಗ ಎಂದಿಗೂ ತ್ಯಾಗ ಸರಿಗಟ್ಟದು! ಶ್ರೇಷ್ಠ ಗೋವಿನ ಶುದ್ಧ ಶಗಣಿಯ ಸುಟ್ಟು ಸಂಸ್ಕರಿಸಿ ಮಾಡುವ ಪವಿತ್ರ ಭಸ್ಮ.ಅನೇಕ ವಿಧ. ಶರೀರದ ಅಂಗಾಂಗಗಳಿಗೆ, ಶರೀರದ ತುಂಬೆಲ್ಲ ಭಸ್ಮ ಧಾರಣೆಯ ಕ್ರಮವಿದೆ. ಭಸ್ಮ ಸ್ನಾನವಿದೆ. ಮೂರು ಬೆರಳುಗಳಿಂದ ಧರಿಸುವುದು ತ್ರಿಪುಂಡ್ರ. ಕಾಮ ಗೆದ್ದೆ, ಗೆಲುವೆ ವಿರಕ್ತನೆಂಬ ಸೂಚಕ ಭಸ್ಮ!
ಸಿದ್ಧಾರೂಢರ ಅಂಗಾರ, ಜಗತ್ತಿಗೆಲ್ಲ ಬಂಗಾರ!!