ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ.
ಧರ್ಮ ಅಧ್ಯಾತ್ಮದ ವಿಶೇಷ ಉತ್ಸವ ಜಾತ್ರೆ. ಹಲವೆಡೆ ಹೆಸರಿಗೆ ಜಾತ್ರೆ, ನಡೆಯುವುದು ವಿಲಾಸ, ಕಿವಿ ಕಣ್ಣು ನಾಲಿಗೆಯ ಹಬ್ಬ! ಊರಹಬ್ಬ ಹುಟ್ಟು ಹಬ್ಬಗಳಲ್ಲಿ ಕೆಲರು ನೀಡುವರು ಸಾವಿರ – ಲಕ್ಷ ಜನರಿಗೆ ಮದ್ಯ ಮಾಂಸ! ಅದು ಹತ್ತು ರೂ ವಸ್ತುವನ್ನು ಸಾವಿರ ರೂ ಗೆ ಮಾರಿ ಹಿರಿದ, ಬೀದಿ ವ್ಯಾಪಾರಿಗಳಿಗೆ ದಿನಕ್ಕೆ ಪ್ರತಿಶತ ಹತ್ತು ರೂಗಳಂತೆ ಬಡ್ಡಿ ಕಿತ್ತಿದ,ಚಿನ್ನದ ಸ್ವತ್ತಿನ ಸಾಲ ನೀಡಿ ಸರ್ವಸ್ವ ಕಬಳಿಸಿದ, ಗುತ್ತಿಗೆದಾರ ಅಧಿಕಾರಿ ಫಲಾನುಭವಿಗಳಿಂದ ಪಡೆದ ಕಮಿಶನ್ ಹಣ! ಬೆವರ ಹರಿಸದೇ ವಾಮಮಾರ್ಗದಿಂದ ಹಣ ಆಸ್ತಿ ಕಿತ್ತಿ ಜನರ ಬೀದಿಗೆ ತಳ್ಳಿ, ಅವರ ಕಣ್ಣೀರಲಿ ಕೈತೊಳೆದು, ಅವರ ಹೆಣದ ಮೇಲೆ ಅದ್ದೂರಿ ವಿಲಾಸ ನಡೆಸುವ ಜನರನೇಕ! ರೈತನ ಮಗ, ಸಾಮಾನ್ಯ ಶಿಕ್ಷಣದ ರಾಜಕಾರಣಿಯ ಮನೆ ನೂರು ಕೋಟಿಯದು! ಕುರ್ಚಿ ಬಂಗಾರದ್ದು! ತಿಂಡಿ ಊಟಕ್ಕೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ! ತನ್ನ ವಿಲಾಸಕ್ಕೆ ಅಳಿಯನಿಂದ ಮಾವನ ಶೋಷಣೆ! ಸತ್ತವನಿಗೆ ಚಿಕಿತ್ಸೆ ನೀಡುವನು ವೈದ್ಯ! ಕೋವಿಡ್ ರೋಗಿಯ ಹಾಸಿಗೆಗೆ ಆಸ್ಪತ್ರೆ ಕೀಳುವುದು ಲಕ್ಷ ಲಕ್ಷ! ಮುನ್ನೂರು ರೂಗಳ ಆಕ್ಸಿಮೀಟರ್ ಮಾರುವರು ನಾಲ್ಕು ಸಾವಿರಕ್ಕೆ! ಶವ ಸಾಗಿಸಲು, ಸುಡಲು, ನಡೆದಿದೆ ಮನಬಂದಂತೆ ಸುಲಿಗೆ! ಹಿಂದೆ ಇತ್ತು ಮಾಲೀಕರಿಂದ ಕಾರ್ಮಿಕರ ಸುಲಿಗೆ. ಇಂದು ನಡೆದಿದೆ ಕಾರ್ಮಿಕರಿಂದ ಮಾಲೀಕರ ಸುಲಿಗೆ! ಅನಿವಾರ್ಯತೆಯ ಇಕ್ಕಟ್ಟಿನ ಅಸಹಾಯಕತೆಯ ಸಮಯವ ದುರ್ಬಳಸಿ ನಡೆಸಿಹರು ಎಗ್ಗಿಲ್ಲದ ಸುಲಿಗೆ ದರೋಡೆ! ತಾನು ತನ್ನವರು ತಲೆತಲಾಂತರ ತಿನ್ನಲು, ನಾಯಕನಾಗಲು ಸಂಪಾದಿಸುವ ಹುಚ್ಚು ದಾಹ!
ಹಣದ ದಾಹವ ತೊರೆಯೋಣ, ಮಾನವರಾಗಿ ಬಾಳೋಣ!!