ಶ್ರೀ. ಡಾ. ಆರೂಢಭಾರತೀ ಸ್ವಾಮೀಜಿ.
ಬಸಿದ್ಧಸೂಕ್ತಿ :
ಮೂಗಿಗಿಂತ ಮೂಗುತಿ ದೊಡ್ಡದು.
ಮೂಗಿನ ಚಂದಕ್ಕೆ ಮೂಗುತಿ. ಮೂಗು ಉಸಿರಾಡುತ್ತೆ, ಮೂಗುತಿಯಲ್ಲ.ಮೂಗು ಮುಖ್ಯ, ಮೂಗುತಿಯಲ್ಲ. ಈ ಪರಿಜ್ಞಾನವಿಲ್ಲದೇ ಮೂಗು ಲೆಕ್ಕಕ್ಕಿಲ್ಲವೆಂಬಂತೆ ಕೆಲರು ಅದ್ದೂರಿ ದೊಡ್ಡ ಮೂಗುತಿಯೊಂದಿಗೆ ಸಂಭ್ರಮಿಸುವರು! ಹನುಮಂತನಿಗಿಂತ ಆತನ ಬಾಲ ಉದ್ದದಂತೆ! ಮೂಗು ಮಾಡಿದ ದೇವರ ನೆನೆಯರು,ಮೂಗುತಿ ಮಾಡಿದ ಅಕ್ಕಸಾಲಿಗನ ಹೊಗಳುವರು! ಕೆಲರಿಗೆ ತಾಯಿಗಿಂತ ಹೆಂಡತಿ, ಹೆತ್ತವರಿಗಿಂತ ಹೊರಗಿನವರೇ ಮುಖ್ಯವೆನಿಸುವರು! 50 ಕೆಜಿ ತೂಕದವರಿಗೆ ಸಾವಿರ ಕೆಜಿ ತೂಕದ ಹಾರ! ಕೆಲ ಹೋಟೆಲ್ಗಳಲ್ಲಿ ತಿಂಡಿ ತೀರ್ಥಕ್ಕಿಂತ ಥಳಕು ಬೆಳಕಿಗೆ ಹೆಚ್ಚು ಕಾಸು! ಕೆಲ ಹರಿಕಥಾದಾಸರು ಮುಖ್ಯ ಕಥೆಗಿಂತ ಉಪಕಥೆಗಳಲ್ಲಿಯೇ ಸಮಯ ಮುಗಿಸುವರು!ಅಂಬಾನಿ ಮಗಳ ಮದುವೆಯ ಒಂದು ಪತ್ರದ ಖರ್ಚು ಐದು ಲಕ್ಷ! ಒಂದು ಊಟದ ಖರ್ಚು ಅಷ್ಟಿರದು! ಕರ್ನಾಟಕದ ಸಚಿವರೊಬ್ಬರ ಮಗಳ ಮದುವೆಗೆ ಸ್ವಾಮೀಜಿಗಳಿಗೆ ಸಂಭ್ರಮದ ಆಹ್ವಾನ! ಬಂದ ಸ್ವಾಮೀಜಿಗಳು ಒಳ ಹೋಗಲು ಪಟ್ಟರು ಹರಸಾಹಸ! ಬಡವರ ಮನೆಯ ಮದುವೆಯ ಸೌಜನ್ಯ ದೊಡ್ಡದೆನಿಸದು! ಫಲ ತಾಂಬೂಲ ಕೊಡದಿರುವುದು ದೊಡ್ಡದೆನಿಸುವುದು! ಹಲವರದು ಆದಾಯಕ್ಕಿಂತ ಖರ್ಚು ಜಾಸ್ತಿ! ದುಡಿಯುವವರಿಗಿಂತ ಕೂತು ಉಣ್ಣುವವರು ಹೆಚ್ಚು! ಆಮಂತ್ರಿತ ಸ್ವಾಮೀಜಿಗಳಿಗೆ ಅದ್ದೂರಿ ಸ್ವಾಗತ! ಹಾರ ತುರಾಯಿ ಜೋರು! ಅವರ ಮಾರ್ಗ ವ್ಯಯ ಊಟೋಪಚಾರವೇ ಇರದು!
ಮುಖ್ಯವ ಹಿಡಿಯೋಣ, ಮುಖ್ಯವಲ್ಲದ ತೊರೆಯೋಣ!