ಡಾ ಆರೂಢಭಾರತೀ ಸ್ವಾಮೀಜಿ.ಅಧ್ಯಕ್ಷರು, ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ, ರಾಮೋಹಳ್ಳಿ.
ಸಿದ್ಧಸೂಕ್ತಿ :
ಮನೆ ಗೆದ್ದು ಮಾರು ಗೆಲ್ಲು.
ಮನೆ ಕುಟುಂಬದ ನೆಲೆ,ಮಾರು ಸಮಾಜ. ನೆಲೆ ಇಲ್ಲದಿರೆ ಬೆಲೆ ಇಲ್ಲ. ಮನುಷ್ಯ ಸಂಬಂಧ-ಸಂಸ್ಕಾರ-ಶಿಕ್ಷಣ ಶುರುವಾಗುವುದು ಮನೆಯಿಂದ. ತಾಯಿಯ ಹಾಲು-ಅನ್ನವನುಂಡು, ನುಡಿ ನಡೆ ಕಲಿಯುವುದು ಇಲ್ಲಿ. ಹಿರಿ ಕಿರಿಯರ ಅನುಭವದ ಪಾಠ ರಸಪಾಕ ಲಬಿಸುವುದು ಇಲ್ಲಿ.ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಮನೆ ಮಾರ ತೊರೆದು ವನವಾಸ ಬೇಡ ಎಂದರು ನಿಜಗುಣರು. ಮನೆಯಿಂದ ಊರು-ದೇಶ-ರಾಷ್ಟ್ರ! ಸಮಾಜದಲ್ಲಿ ಹೆಸರು ಸೇವೆ ಮಾಡುವ ದಾಹ! ಎಲ್ಲಿ ನಿಂತು? ನೆಲೆ ನಿಲ್ಲದೇ ಮಾಡಲಾಗದು. ನೆಲೆ ಹೊಗೆಯಾಡಿದರೆ,ಉಡಿಯಲ್ಲಿ ಬೆಂಕಿ ಕೊಂಡಂತೆ! ತನ್ನ ತನ್ನವರನ್ನು ಉಣಿಸಿ ಬೆಳೆಸಿದ ತಂದೆ ತಾಯಿ, ಅತ್ತೆ ಮಾವ, ಹಿರಿಕಿರಿಯರನ್ನು ಗೌರವಿಸದವ /ಳು, ಸೇವಿಸದವ/ಳು ಬೇರೆಯವರನ್ನು ಗೌರವಿಸುವ ಸೇವಿಸುವ ಮರ್ಮವೇನು? ತಾನೇ ಪಾಲಿಸದ ಆದರ್ಶ ಅನ್ಯರು ಪಾಲಿಸುವುದೆಂತು? ಮೊದಲು ಮನೆ, ತನ್ನುದ್ಧಾರ! ಬಳಿಕ ಸಮಾಜ, ಜಗದುದ್ಧಾರ! ನೆನಪಿರಲಿ, ಸಮಾಜ ಕೈ ಕೊಟ್ಟಾಗ, ನೆಗೆದು ಬಿದ್ದಾಗ, ಮತ್ತೆ ಹಿಡಿದೆತ್ತಿ ನೆಲೆ ನೀಡುವುದು ಮನೆ! ಮನೆಗೆ ಮಾರಿಯಾಗಿದ್ದು ಊರಿಗೆ ಉಪಕಾರಿಯಾದರದು ಅಸಂಸ್ಕೃತಿ. ಮನೆ ಗೆದ್ದು ಮಾರು ಗೆದ್ದರದು ಸುಸಂಸ್ಕೃತಿ! ಜಗತ್ತೇ ಮಿಥ್ಯಾ ಎಂದ ಸಂನ್ಯಾಸಿ ಶಂಕರರು ತಾಯಿಯ ಅಂತ್ಯಸಂಸ್ಕಾರಗೈದುದು ನಿದರ್ಶನ! ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎಂದ ಬಸವಣ್ಣ!
ಮೊದಲು ಮನೆಯನು ಬೆಳಗೋಣ, ನಾವು ದೇಶವ ಬೆಳಗೋಣ!!