
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಮಂತ್ರ.
ಮತ್ತೆ ಮತ್ತೆ ಮನನದಿಂದ ಕಾಪಾಡುವುದು ಮಂತ್ರ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ತಪೋನಿಷ್ಠ ಮುನಿಗಳ ಹೃದಯಾಂತರಾಳ ಮುಖಕಮಲದಿಂದ ಹೊರಹೊಮ್ಮಿದ್ದು. ಶ್ಲೋಕ, ಬೋಧಪ್ರದ ಗುರೂಪದೇಶವೂ ಮಂತ್ರ. ಋಗ್ ಯಜುಃ ಸಾಮ ಅಥರ್ವ ವೇದವೆಲ್ಲ ಮಂತ್ರರೂಪ! ಗಾಯತ್ರಿ ಪಂಚಾಕ್ಷರಿ ಷಡಕ್ಷರಿ ತ್ರಯೋದಶಾಕ್ಷರಿ ಹೀಗೆ ಜಪ ಹೋಮ ಪೂಜಾದಿ ಬಳಕೆಯ ಮಂತ್ರಗಳನೇಕ. ಪ್ರತಿ ಮಂತ್ರದ ಆರಂಭದಲ್ಲಿ ಓಂಕಾರದ ಬಳಕೆ. ಓಂ ಭೂರ್ಭುವಃ ಸುವಃ, ಓಂ ಶ್ರೀ ಗುರು ಬಸವಲಿಂಗಾಯ ನಮಃ ಇತ್ಯಾದಿ ಆಧುನಿಕ ಮಂತ್ರ. ಮಂತ್ರಾರಂಭದ ಓಂ ಐಂ ಹ್ರೀಂ ಕ್ಲೀಂ ಮುಂತಾದ ಅಕ್ಷರ ಬೀಜಾಕ್ಷರ. ದಿವ್ಯ ಶಕ್ತಿ ಬೋಧಕ ಉದ್ಯೋತಕ! ಓಂ ಐಂ ಹ್ರೀಂ ಕ್ಲೀಂ ದುರ್ಗಾಯೈ ನಮಃ. ಸದಾಚಾರ ಸಂಪನ್ನ ಮಂತ್ರಾನುಷ್ಠಾನಗೈದ ಪರಿಶುದ್ಧ ದೇಹಾಂತರಂಗ ಜಾತಿ ಲಿಂಗ ವಯೋಭೇದರಹಿತ ಸದ್ಗುರು, ಮಂತ್ರದ ಹಸಿವಿರುವ ಶಿಷ್ಯರಿಗೆ ಕುಲಧರ್ಮಾದಿ ಭೇದವೆಣಿಸದೇ ಮಂತ್ರ ನೀಡುವನು.ಶ್ರದ್ಧಾ ಭಕ್ತಿಯ ಶಿಷ್ಯ ಬ್ರಾಹ್ಮೀ ಮುಹೂರ್ತದಿ ತಣ್ಣೀರ ಸ್ನಾನಗೈದು ಮಡಿಬಟ್ಟೆಯಲಿ ಗುರುಪೂಜಿಸಿ ಮಂತ್ರ ಪಡೆವುದು ಮಂತ್ರದೀಕ್ಷೆ. ಮಂತ್ರ ಹೇಳು- ಕೇಳುಗರ ಉದ್ಧಾರಕ! ರಹಸ್ಯ ಬೇಕಿಲ್ಲ. ಅವರಿವರು ಆಲಿಸಿದರೆ ಕಿವಿಗೆ ಕಾಯ್ದ ಸೀಸ ಹೊಯ್ಯಬೇಕು, ಹೇಳಿದರೆ ನಾಲಿಗೆ ಸೀಳಬೇಕೆಂಬ ಬ್ರಹ್ಮಸೂತ್ರ – ಅಪಶೂದ್ರಾಧಿಕರಣದ ಆದಿಶಂಕರರ ಮಾತು ಖಂಡನೀಯ. ಒಲವು ತೋರಿ ಹೇಳಿದವನು ಪಾಪಿ, ಗಣೇಶ ಸೂಕ್ತದ ಮಾತು ತ್ಯಾಜ್ಯ! ಓಂ ನಮಃ ಶಿವಾಯ ಸಿದ್ಧಾರೂಢರ ಉದ್ಘೋಷ!!