ಶ್ರೀ ಡಾ.ಆರೂಢಭಾಸರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ
ಬೆಕ್ಕು ಇಲಿಯ ಕಚ್ಚಿ ಕಚ್ಚಿ ಆಡಿ ನಲಿಯುವುದು,ಇಲಿ ಸಂಕಟದಿ ಒದ್ದಾಡುವುದು! ಚಿರತೆಯಿಂದ ಪಾರಾಗಲು ನಾಯಿ ಶೌಚಾಲಯಕ್ಕೆ ನುಗ್ಗಿತು. ಚಿರತೆಯೂ ಅಲ್ಲಿ ಹೊಕ್ಕಿತು! ಹೊರಗೆ ಮಾಲೀಕ ಕೊಂಡಿ ಹಾಕಿದ. ನಾಯಿಯ ಸಂಕಟ ದೇವರೇ ಬಲ್ಲ! ಚಿರತೆಗೂ ಸಂಕಟ ತಪ್ಪಿದ್ದಲ್ಲ! ಹಿಂಸೆ ನೀಡುವವಗೊಬ್ಬ ಬಲಿಷ್ಠ ಹಿಂಸಕ! ತಿನ್ನುವ ಆಶೆಗೆ ಹಸುವನು ಕುರಿಯನು ಕೊಚ್ಚುವನು, ತಾಜಾ ಮಾಂಸವ ನೋಡುತ ಬಹಳ ಸುಖಿಸುವನು. ಅಂಬಾ ಬ್ಯಾ ಎಂದರಚುತಲಿ ಒದ್ದಾಡುತ ಜೀವ ಸಾಯುವುದು! ಸಾಯುವ ಜೀವಿಯ ಸಂಕಟ ಪರಿಯನು ಕಾಣುತಲಿ, ಮೃದು ಸಾತ್ತ್ವಿಕ ಹೃದಯ ಕೊರಗುವುದು! ಮಾತಿನಂತೆ ಕರುವಿಗೆ ಹಾಲನು ಉಣಿಸಿ, ಖಂಡವಿದೇಕೋ ಮಾಂಸವಿದೇಕೋ? ಇಗೋ ತಿನ್ನೆಂದ ಪುಣ್ಯಕೋಟಿಯ ಕಂಡ ಹುಲಿ ಇಟ್ಟಿತು ಕಣ್ಣೀರ! ಮಾನವರೂಪದ ಬುದ್ಧಿಜೀವಗಳು ಹಸುಮಾಂಸದ ತುಂಡನು ಮೆಲ್ಲುವವು! ವಿದ್ಯೆ ಹಣ ಅಧಿಕಾರ ಜಾತಿ ಮದ ಅಮಲೇರಿದ ಒರಟು ಜನ, ದುರ್ಬಲ ಸಾತ್ತ್ವಿಕ ನೆತ್ತಿಯ ತುಳಿದು ಸುಖಿಸುವರು.ಪೆಟ್ಟನು ತಿನ್ನುವ ವ್ಯಕ್ತಿಯ ಕಂಡು ಪಕ್ಕದ ವ್ಯಕ್ತಿ ಧಾವಿಸುವ, ಸಲ್ಲದ ಆರೋಪಗಳನು ಎಸೆಯುತ ಪೆಟ್ಟಿಗೆ ಪೆಟ್ಟು ಜೋಡಿಸುವ! ಬಾಳೆಯ ಹಣ್ಣಿನ ಸಿಪ್ಪೆಯ ಎಸೆದು, ಜಾರುತ ಬೀಳುವ ವ್ಯಕ್ತಿಯ ಕಂಡು ಕುಹಕದಿ ನಗುವ ಜನರಿಹರು!
ಸಾತ್ತ್ವಿಕರಾಗೋಣ, ಪ್ರಾಣ ಸಂಕಟ ತಡೆಯೋಣ!!