
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ(ಹೊರಗ ಬಸಪ್ಪ ಒಳಗ ವಿಷಪ್ಪ)
ಬಾಯಲ್ಲಿ ಬಸವ! ಶಿವ! ಹರಿ! ವಿಷ್ಣು! ಗೋವಿಂದ! ರಾಮ! ಕೃಷ್ಣ! ಎಂದು ಜಪಿಸುವರು ಹಲರು! ಅಂತರಂಗವೂ ಹಾಗಿದ್ದರೆ ಬಲು ಚೆನ್ನ! ಅಂಥವರ ತನು ಭಾವ ಶುದ್ಧ! ಹಾಗಿರರು ಕೆಲರು. ಹೊರಗೆ ಗುರು ದೇವರ ಜಪಃ! ಒಳಗೆ ವಿಷ ಸಂಚಿನ ತಪಃ! ತೋರಿಕೆಗೆ ಮಠ ಮಂದಿರ ಮಸೀದಿ ಚರ್ಚ್ ಗೆ ನುಗ್ಗುವರು, ತಲೆ ಬಾಗುವರು. ಕುಂಕುಮ ಟೋಪಿ ಶಿಲುಬೆ ವೇಷ ಧರಿಸುವರು, ಪೂಜೆ ಪ್ರಾರ್ಥನೆಗೈಯ್ಯುವರು. ದಾನ ಧರ್ಮ ಮಾಡುವರು, ಧವಸ ಧಾನ್ಯ ವಸ್ತು ಒಡವೆ ವಸ್ತ್ರ ಹಣವ ಹಂಚುವರು. ಒಳಗಡೆ ತನ್ನ, ತನ್ನಯ ಸಂತತಿ ಗೆಲುವು ಉಳಿವಿನ ಲೆಕ್ಕಾಚಾರದಿ ಮುಳುಗುವರು! ಭಕ್ತನಂತೆ ಹೊರ ನಟಿಸುವನು, ಕನ್ನವ ಹಾಕಿ, ಚಿನ್ನ ಬೆಳ್ಳಿ ಹಣ ವಿಗ್ರಹ ದೋಚುವನು! ಚೆಂದದ ಮಾತನು ಆಡುವನು, ನಂಬಿಸಿ ಕುತ್ತಿಗೆ ಕೊಯ್ಯುವನು. ಕೊಟ್ಟು ಪಡೆದು, ದ್ವಿಗುಣ ಮಾಡಿ, ನಂಬಿಗೆಯನ್ನು ಹುಟ್ಟಿಸುವ, ಲಕ್ಷ ಕೋಟಿ ಎಗರಿಸುವ! ಕೆನ್ನೆಯ ಸವರಿ, ಕಣ್ಣೀರ್ ಒರಸಿ, ನಂಬಿಗೆ ಬರಿಸಿ, ದೂರಕೆ ಕರೆದು ಒಯ್ಯುವನು! ಗುಂಡಿಗೆ ತಳ್ಳಿ, ಕಲ್ಲನು ಹಾಕಿ, ಅಸ್ತ್ರದಿ ಕತ್ತನು ಸೀಳುವನು! ನೀನೆ ನನ್ನ ಪ್ರಾಣ ಎಂದು ಪ್ರೀತಿಯ ಬಹಳ ನಟಿಸುವಳು, ಹೃದಯದಿ ಪ್ರಿಯಕರ ಬರವನು ಕಾಯ್ದು ತೊಲಗಲಿ ಇವನೆಂದೆನ್ನುವಳು!
ಎಚ್ಚರಾಗಿರೋಣ, ನಿಜವನು ತಿಳಿದು ಉಳಿಯೋಣ!!