
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ನಿನ್ನುದ್ಧಾರವೆಷ್ಟಾಯ್ತೋ ಮಂಕುತಿಮ್ಮ.
“ಮುಖ್ಯಮಂತ್ರಿಯಾದರೆ ಹಾಗೆ ಹೀಗೆ ಮಾಡುವೆ” ವಿದ್ಯಾರ್ಥಿಭಾಷಣ ರೋಚಕ, ನಿಜ ಜೀವನ ಶೋಚ್ಯ! ತಾನೊಂದು ಬಗೆದರೆ ದೈವವೊಂದು ಬಗೆವುದು! ಎಲ್ಲ ಅಂದುಕೊಂಡಂತೆ ಆದರೆ ದುಃಖವೆಲ್ಲಿ? ಏಳುವುದರೊಳಗೊಬ್ಬ ಕಾಲೆಳೆದು ಕೆಡವುವನು! ಬಗ್ಗುಬಡಿಯುವುದರೊಳಗೆ ತಾ ನೆಲಕಚ್ಚುವನು! ಇಲಿ ಬಂದಿತೆಂದರೆ ಹುಲಿ ಬಂದಿತೆಂಬ ರೀತಿ ವಿವಾದ ಹುಟ್ಟಿಸಿ ಹೆಸರ ಮಾಡುವನು, ನಿಜ ಬಯಲಾಗಲು ಮಾನಗೇಡಿ! ಜಗವ ಉದ್ಧರಿಸುವೆ ಎಂದು ಬೀಗುವನು, ತಾ ನಿಂತ ನೆಲೆಯೇ ಹೋಳು! ನಂಬಿ ಕೊಟ್ಟ, ಮುಳುಗಿತು! ನಂಬಿ ಕೈ ಹಿಡಿದ, ಕೈ ಕಳಚಿತು! ಹಣ ಆಸ್ತಿ ಹೆಚ್ಚಿದ್ದರೆ ಜನ ಕೈ ಹಿಡಿವರೆಂದು ಗಳಿಸಿದ, ನುಂಗುವವರ ಸಂಚಿಗೆ ಮುಳುಗಿದ! ಜಾತಿ ಎಂದ, ಜಾತಿಗರ ಅಡ್ಡಗಾಲು! ಬಂಧುಗಳೆಂದ, ಬರಿದಾದಾಗ ಒಬ್ಬರಿಲ್ಲ! ಬೆಂಬಲಿಗರೆಂದ, ಅಧಿಕಾರ ವಾಲುತ್ತಲೇ, ಇಲ್ಲಿನವರೇ ಅಲ್ಲಿ! ಮಗ ಹುಟ್ಟಿದನೆಂದು ಖುಷಿಪಟ್ಟ, ಮಗನಿಂದಲೇ ಜೈಲು! ಆಶೆ ಅನಂತ ಆಕಾಶದೆತ್ತರ! ಅವುಗಳ ಕನಸ್ಸಿನಲ್ಲಿ ವರ್ತಮಾನ ಬದುಕ ಸುಟ್ಟುಕೊಂಡು, ಹೊಟ್ಟೆ ಬಟ್ಟೆ ಕಟ್ಟಿ, ಮಕ್ಕಳ ಶಿಕ್ಷಣಕ್ಕೋ ಅನ್ಯರ ಖುಷಿಗೋ ಲಕ್ಷ ಲಕ್ಷ ಸುರಿಯುವವರ ಗೋಳು ವಿಚಿತ್ರ! ಬಣ್ಣ ನಾಟಕ ಬಿಟ್ಟು, ವಾಸ್ತವ ನೆಚ್ಚಿ, ಮೊದಲು ನಾವು ಉದ್ಧಾರಾಗೋಣ, ಬಳಿಕ ಅನ್ಯರ ಎತ್ತೋಣ!!