
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ನಾ ನಿನಗಾದರೆ, ನೀ ನನಗೆ.
ನೀ=ನೀ, ಪರ, ಸಮಾಜ.
ಪರಸ್ಪರ ಸಹಕಾರ ಜಗದ ಅಗತ್ಯ.ಕಿವಿ ಕೇಳುವುದು, ಕಣ್ಣು ನೋಡುವುದು, ಬಾಯಿ ಮಾತನಾಡುವುದು, ಕಾಲು ಹೋಗುವುದು,ಕೈ ತೆಗೆದುಕೊಳ್ಳುವುದು. ಪರಸ್ಪರ ಸಹಕಾರ ಇಲ್ಲದಿರೆ ಇವು ನಡೆಯವು. ಕಿವಿ ಅಹಂಕಾರಿಯಾದರೆ, ಕಣ್ಣೆತ್ತಿ ನೋಡದು, ಕಾಲು ಹೊರಡದು! ಬೆರಳುಗಳು ಹೇಳುತ್ತವೆ “ಹಿರಿ ಕಿರಿದಾದರೂ ಹೊಂದಿ ಒಂದಾದರೆ, ಅದ್ಭುತದ ಸಾಧನೆ”. ನನಗಿರುವುದು ನಿನಗಿಲ್ಲ, ನಿನಗಿರುವುದು ನನಗಿಲ್ಲ. ನಿನ್ನದು ನನಗೆ ಬೇಕು, ನನ್ನದು ನಿನಗೆ ಬೇಕು. ನಾ ನಿನಗೆ ಕೊಟ್ಟರೆ, ನೀ ನನಗೆ ಕೊಡುವಿ! ಇಲ್ಲದಿರೆ ನನ್ನದು ನನಗೇ, ನಿನ್ನದು ನಿನಗೇ! ಕೊರಗು ತಪ್ಪದು! ಗಂಡ ಹೆಂಡತಿಯ ಹಿತ ಬಯಸಿದರೆ, ಹೆಂಡತಿ ಗಂಡನ ಹಿತ ಬಯಸುವಳು. ನಾವು ಇನ್ನೊಬ್ಬರಿಗೆ ನೆರವಾಗದಿದ್ದಲ್ಲಿ, ಇನ್ನೊಬ್ಬರ ನೆರವನ್ನು ನಾವೇಕೆ ಬಯಸುವುದು? ಪರರೇ ಮೊದಲು ನಮಗಾಗಬೇಕೆಂದರೆ, ಅವರೂ ಹಾಗೇ! ತಂದೆ ತಾಯಿಗಳು ಮಕ್ಕಳನ್ನು ಪಾಲಿಸಿ ಬೆಳೆಸುವರು. ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಆಮೇಲಿನದು! ಮೊದಲೇ ಬಯಸಿದರೆ? ಪರರಿಗಾದರೆ ಮಕ್ಕಳು ನೋಡದಿದ್ದರೂ, ಅನಾಥೋ ದೈವರಕ್ಷಿತಃ, ಯಾರೋ ಕಾಪಾಡುವರು! ನಾನೇ ಮೊದಲಾಗದಿದ್ದಲ್ಲಿ, ಸತ್ತಾಗ ಹೆಣ ಹೊರಲಿಕ್ಕೂ ಯಾರೂ ಸಿಗದಾದಾರು!
ಸ್ನೇಹದಿ ಬಾಳೋಣ, ಒಬ್ಬರಿಗೊಬ್ಬರು ಆಗೋಣ!!