ದೈವ ಗುಟ್ಟದು ತಿಳಿಯೆ ಮಂಕುತಿಮ್ಮ!

Share

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :

ದೈವ ಗುಟ್ಟದು ತಿಳಿಯೆ ಮಂಕುತಿಮ್ಮ!
ದೈವರಹಸ್ಯ ನಾ ತಿಳಿಯಲಾರೆ! ಎಲ್ಲೋ ಯಾವುದೋ ತಣ್ಣೀರನ್ನು ಹೀರಿ ಬೆಳೆದ ಬೇಳೆ, ಮತ್ತಿನ್ನೆಲ್ಲೋ ಯಾವುದೋ ಬಿಸಿ ನೀರಿನಲ್ಲಿ ಕ್ವಥ ಕ್ವಥ ಬೇಯುವುದು! ಯಾವನೋ ಬೆಳೆಯುವನು, ಯಾವನೋ ತಿನ್ನುವನು! ಯಾವನೋ ಕಟ್ಟುವನು ಯಾವನೋ ನೆಲೆಸುವನು! ಮನೆಯಲ್ಲಿ ಮಗು ಮೇಕೆ ದನ ಕರುಗಳನ್ನು ಮುದ್ದಿಸಿ ಬೆಳೆಸುವ ಕೈಗಳು, ಕಸಾಯಿಖಾನೆಯಲ್ಲಿ ಹಸು ಕುರಿ ಕರುಗಳ ತುಂಡರಿಸುವವು! ಹಾಲುಂಡು ನುಡಿಗಲಿತು ನಕ್ಕು ನಲಿಸಿದ ಮುದ್ದು ಮುಖದಿಂದ, ಹೆತ್ತ-ಹಿರಿಯರಿಗೆ ಕಠೋರ ವಾಗ್ಬಾಣ! ವಿಶ್ವಾಸವಿಟ್ಟ ಮಿತ್ರರ ನಂಬಿಗೆ ದ್ರೋಹ! ಕಾಪಾಡಬೇಕಾದವರ ವಂಚನೆ! ಬೆನ್ನಿಗೆ ಚೂರಿ! ಪ್ರೀತಿಸಿ ಕೈ ಹಿಡಿದ ಸತಿಪತಿಯರ ಪ್ರತ್ಯೇಕ! ಸಹೋದ್ಯೋಗಿ ಸಜಾತಿ ನೆರೆಹೊರೆ ಬಂಧು ಬಾಂಧವರ ಹೊಗೆಯಾಡದ ಒಳಬೇಗುದಿ! ಒಂದಿದೆ, ಒಂದಿಲ್ಲ! ಎಲ್ಲ ಇದೆ, ಅನುಭವಿಸುವಂತಿಲ್ಲ! ಸರಿ ತಪ್ಪು ವೇದ್ಯವಾಗದು, ಏತಕ್ಕಾಗಿ? ಯಾವ ಪಕ್ವತೆಗಾಗಿ? ತಿಳಿಯದು, ಅತಿ ವಿಚಿತ್ರ ಈ ಜಗದ ರಹಸ್ಯ! ಹೊರಗೆ ಹೊಳೆದರೂ ಒಳಗೆ ಏನಿದೆಯೋ? ಆಳಕ್ಕಿಳಿಯದೇ ರಹಸ್ಯವರಿಯದೇ ಆಡುವ ಮಾತು ಆಕ್ಷೇಪ ಟೀಕೆ ಸ್ತುತಿ ನಿಂದೆ ಅರ್ಥಶೂನ್ಯ! ಅದು ಬಚ್ಚಲಿನ ರೊಚ್ಚು! ವಿವರ ಅರಿಯದಿರೆ ಮೌನವೇ ಬಂಗಾರ!

Girl in a jacket
error: Content is protected !!