
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ದೇಶ ಸುತ್ತಿ ನೋಡು, ಕೋಶ ಓದಿ ನೋಡು.
ನೋಡು=ತಿಳಿ. ಕೋಶ=ಶಬ್ದಕೋಶ, ಗ್ರಂಥ. ಮನುಷ್ಯ ಬುದ್ಧಿಜೀವಿ. ತಿಳಿಯಲೇಬೇಕು. ಇಲ್ಲದಿರೆ ಪಶು. ಹುಟ್ಟಿದಾಗ ಮಾನವ ಸಚೇತನ ಮಾಂಸಪಿಂಡ. ಅದ್ಭುತ ಜ್ಞಾನಗ್ರಹಿಕೆಗೆ, ಕಾರ್ಯಸಾಧನೆಗೆ ಅಗತ್ಯ ಅಂಗಾಂಗ ರಚನೆಯ ಬಳಿಕವೇ ಭುವಿಗವತರಣ. ಜ್ಞಾನ ಗಳಿಸಿದಂತೆ, ಮಾನವ ದೇವಮಾನವ! ಪ್ರತಿ ವ್ಯಕ್ತಿ ವಸ್ತು ಜೀವಿ ಪರಿಸರ ಪ್ರತಿಕ್ಷಣ ಪಾಠ ಕಲಿಸುವುದು! ಗಾಳಿಗೆ ಕಿಡಕಿ ಬಾಗಿಲ ತೆರೆಯಬೇಕು. ಮನ ಇಂದ್ರಿಯಗಳ ತೆರೆದು ಸದಾ ಪಾಠ ಕಲಿಯಬೇಕು! ಬಲ್ಲ ಅನುಭವಿಕರ ಕೋಶ ಶಾಸ್ತ್ರ ಪುರಾಣ ಕಾವ್ಯ ಗ್ರಂಥ, ದೂರದರ್ಶನ, ಅಂತರ್ಜಾಲಗಳು ಜ್ಞಾನನಿಧಿಯ ಹೊರಸೂಸುತಿವೆ. ಪೂರಕವ ಓದಿ, ನೋಡಿ, ಕೇಳಿ ಗ್ರಹಿಸಬೇಕು. ಮಾರಕದಿ ದೂರ ಇರಬೇಕು! ಚಿತ್ರದ ನೀರು ತೊಯ್ಯಿಸದು, ಬೆಂಕಿ ಸುಡದು, ಊಟ ಹೊಟ್ಟೆ ತುಂಬಿಸದು, ಅದು ಪರೋಕ್ಷ! ಪ್ರತ್ಯಕ್ಷವಲ್ಲ. ಬರೀ ಪುಸ್ತಕದ ಜ್ಞಾನ ಪರೋಕ್ಷ! ಅದು ಸಾಲದು! ಮಸ್ತಕಕ್ಕೇರಿ ರಸವಾಗಬೇಕು! ಅದಕ್ಕೇ ದೇಶ ಸುತ್ತಬೇಕು. ಇದು ಪ್ರತ್ಯಕ್ಷ ಪ್ರಾಯೋಗಿಕ! ವಿಭಿನ್ನ ವೇಷ ಭಾಷೆ ಸಂಸ್ಕೃತಿ ಆಹಾರ ವಿಹಾರ ವಿಚಾರ ವಿದ್ಯೆಯ ಜನರೊಡನಾಡಬೇಕು. ಪ್ರಕೃತಿ ಸೊಬಗ ಸವಿಬೇಕು. ವಿಕೋಪ ಅರಿಯಬೇಕು. ಸುಖ ದುಃಖ ಅನುಭವಿಸಬೇಕು. ಆಗಲೇ ಹೊರಹೊಮ್ಮುವುದು ಜೀವನದ ನಿಜ ರಸಪಾಕ!
ದೇಶವ ಸುತ್ತೋಣ, ಕೋಶ ಓದಿ ತಿಳಿಯೋಣ!!