
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ತಬ್ಬಿಕೊಳೊ ವಿಶ್ವವನೆ ಮಂಕುತಿಮ್ಮ.
ಜಂಜಾಟ ಬೇಡೆಂದು ಒಂಟಿತನ ಬಯಸುವರು. ಸಂನ್ಯಾಸ ಬದುಕಿಗೆ ಇದು ಆಗಬಹುದು. ಸಂಸಾರ ಜೀವನಕ್ಕೆ ಇದು ಎಂದಿಗೂ ಹೊಂದದು. ಒಂದೇ ತಾ ಸುಖಿಸಲಾರೆ ಎಂದಿತಂತೆ ಅದ್ವಿತೀಯ ಪರಬ್ರಹ್ಮ! ಸಂಗಾತಿಯನ್ನು ಬಯಸಿತಂತೆ! ಇದ್ದ ತಾನೊಂದೇ ಗಂಡ ಹೆಂಡತಿಯಾಯಿತಂತೆ! ಏಕಾಕೀ ನ ರಮತೇ. ಸ ದ್ವಿತೀಯಮೈಚ್ಛತ್. ಪತಿಶ್ಚ ಪತ್ನೀಶ್ಚಾಭವತ್ – ಎನ್ನುವುದು ಬೃಹದಾರಣ್ಯಕ ಉಪನಿಷತ್. ಬಹುಸ್ಯಾಂ ಪ್ರಜಾಯೇಯೇತಿ ಎನ್ನುವುದು ತೈತ್ತಿರೀಯ ಉಪನಿಷತ್. ಜಾಮೂನ್ ಮಿಕ್ಸ್ಗೆ ಸಕ್ಕರೆ, ಚಪಾತಿಗೆ ಪಲ್ಯ, ಅನ್ನಕ್ಕೆ ಸಾಂಬಾರು… ಬೆರೆತರೆ ಚೆನ್ನ! ಒಂದೊಂದೇ ತಿಂದರೆ ಇಲ್ಲ ಸ್ವಾರಸ್ಯ! ಹೆಣ್ಣಿರದ ಗಂಡಿಗೆ ಚಡಪಡಿಕೆ! ಗಂಡಿರದ ಹೆಣ್ಣಿಗೆ ತಳಮಳ! ಗಂಡ ಹೆಂಡತಿ ಅಪ್ಪ ಅವ್ವ ಅಜ್ಜ ಅಜ್ಜಿ ಮಗ ಮಗಳು ಅಳಿಯ ಸೊಸೆ ಅತ್ತೆ ಮಾವ ಸಹೋದರ ಸಹೋದರಿ,ಗುರು ಶಿಷ್ಯ ಒಂದಕ್ಕೊಂದು ಒಬ್ಬರಿಗೊಬ್ಬರು ಬೆರೆತು ಅನುವಾಗುವ ಜೀವನದ ಸೊಬಗೇ ಸೊಬಗು! ಒಬ್ಬನೇ ಉಣ್ಣುವ ಊಟದಲ್ಲಿ ಸವಿ ಸೊಗಸಿಲ್ಲ. ದೀರ್ಘ ಬದುಕು ಜನರೊಂದಿಗೆ ಬೆರೆತಿರಲಿ. ಜಗವೇ ನನ್ನದೆಂದು ಅಪ್ಪುವ ವಿಶಾಲ ಹೃದಯ ನಮ್ಮದಾಗಿರಲಿ!!