
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ತಣ್ಣಗಿರಿಸಾತ್ಮವನು ಮಂಕುತಿಮ್ಮ.
ಬಹುತೇಕರಿಗೆ ಕ್ಷಣ ಕ್ಷಣ ಆತಂಕ! ಇವತ್ತು ಹೀಗೆ, ನಾಳೆ ಏನು ಕಾದಿದೆಯೋ? ಎಂಬ ಲೆಕ್ಕ! ಶತ್ರುವಿಗೆ ಗಂಡು ಮಗು ಹುಟ್ಟಿದರೆ, ಇವರಿಗೆ ನಡುಕ! ಪಕ್ಕದ ಮನೆಯವರಿಗೆ ಕೊರೋನಾ ಬಂದರೆ ಇವರ ಆತಂಕ ಹೇಳಲಾಗದು! ಗಂಡನಿಗೆ ಕೋರೋನಾ, ಹೆಂಡತಿಗೆ ಖಿನ್ನತೆ! ಗಂಡನ ಕೊರೋನಾ ವಾಸಿ, ಹೆಂಡತಿಯ ಖಿನ್ನತೆ ಗಟ್ಟಿ! ಇಂಥವರೊಬ್ಬರು ನಮ್ಮ ಬಳಿ ಬಂದಾಗ ಕೇಳಿದೆ:ಈ ನಿಮ್ಮ ಗಂಡ ಹುಟ್ಟಿರುವುದನ್ನು ಖಾತರಿಪಡಿಸಿಕೊಂಡ ಬಳಿಕ ನೀವು ಹುಟ್ಟಿದಿರಾ? ಉತ್ತರವಿಲ್ಲ! ಗಂಡ ಹೆಂಡತಿ ಮಕ್ಕಳು ಆಸ್ತಿ ಏನೆಲ್ಲ ಇದು ನಮ್ಮ ವ್ಯವಸ್ಥೆ! ಪ್ರಕೃತಿಯ ಲೀಲೆ! ಯಾರಿಗೆ ಯಾರೂ ಅನಿವಾರ್ಯವಲ್ಲ! ಇರುವವರೆಗೆ ಅನುಕೂಲಕ್ಕಾಗಿ ಬಾಡಿಗೆ ಮನೆಯ ಕರಾರಿನಂತೆ ನಮ್ಮ ಒಪ್ಪಂದ! ಡಿವಿಜಿ ಹೇಳುವರು:ಭಯ ಆತಂಕ ಬೇಡ! ನೀ ಭಯಪಟ್ಟಿರುವಿ ಎಂದು ಜಗತ್ತು ನೀ ಹೇಳಿದಂತೆ ನಡೆಯುವುದೇ? ವಿಧಿಯಾಟ ನಿನ್ನ ಕೈಲಿದೆಯೇ? ಚಲಿಸುವ ವಾಹನದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ದಾಪುಗಾಲು ಹಾಕಿದರೆ ಬೇಗ ತಲುಪಲಾದೀತೇ? ನಮ್ಮ ಪ್ರಯತ್ನಗಳಿಗೆ ಸೀಮೆ ಇದೆ. ಅದನ್ನು ಮೀರಿ ಸಾಧಿಸಲಾಗದು. ದೈವ ಸಂಚು ಕಣ್ಣಿಗೆ ಕಾಣದು! ಆಗಬೇಕಾದುದನ್ನು ತಡೆಯಲಾಗದು. ನಡೆಯಲಾಗದ್ದನ್ನು ನಡೆಸಲಾಗದು! ಬಾರದು ಬಪ್ಪದು, ಬಪ್ಪುದು ತಪ್ಪದು! ಬಂದದ್ದೆಲ್ಲಾ ಬರಲಿ, ಗುರು ದೈವದ ಕೃಪೆಯೊಂದಿರಲಿ ಎಂಬ ಸಮಾಧಾನದ ಮನವಿರಲಿ!!