
ಶ್ರೀ ಆರೂಢ ಭಾರತೀ ಸ್ವಾಮೀಜಿ
ಜಂಗಮ
ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಜನನ ಮರಣ ರಹಿತ ತತ್ತ್ವ, ಬ್ರಹ್ಮ ಪರಮಾತ್ಮಾ ದೇವರು ಇತ್ಯಾದಿ. ಹುಟ್ಟುವುದು, ಸಾಯುವುದು. ನಾಮ ರೂಪಾತ್ಮಕ ವ್ಯಕ್ತಿ – ವಸ್ತುಗಳೆಲ್ಲೆಡೆ ಸೂಕ್ಷ್ಮರೂಪದಿಂದ ವ್ಯಾಪಿಸಿದ ತತ್ತ್ವ ಜಂಗಮ. ನಿರ್ದಿಷ್ಟ ನಾಮ ರೂಪ ಅದಕ್ಕಿಲ್ಲ.ಎಲ್ಲ ನಾಮ ರೂಪವೂ ಅದರದ್ದೇ. ಹೀಗೆ ಅದು ಜನನ ಮರಣ ರಹಿತ. ನೀರು ಗುಳ್ಳೆಯಾಗುವುದು, ಒಡೆಯುವುದು. ಉಬ್ಬಿದ ರೂಪ, ಗುಳ್ಳೆ ನಾಮ, ಒಡೆದ ಬಳಿಕ ಇಲ್ಲ. ಮೊದಲೂ ನೀರು, ಒಡೆದ ಮೇಲೂ ನೀರು! ಬಂಗಾರದಿಂದ ಬಗೆ ಬಗೆ ಆಭರಣ. ರೂಪ ಬೇರೆ, ಹೆಸರು ಭಿನ್ನ. ಕರಗಿಸಿದರೆ ಆ ರೂಪ-ನಾಮವಿಲ್ಲ! ಮೊದಲೂ ಬಂಗಾರ, ಆಭರಣಗಳೂ ಬಂಗಾರ, ಕರಗಿದಾಗಲೂ ಬಂಗಾರ! ಅದರಂತೆ, ಅಂಡಜ ಪಿಂಡಜ ಸ್ವೇದಜ ಉದ್ಭಿಜಗಳೆಂಬ ಅನಂತ ಜೀವಸಂಕುಲ. ರೂಪ ಬೇರೆ, ಹೆಸರು ಬೇರೆ. ಈ ವಸ್ತು ವ್ಯಕ್ತಿಗಳು ಹುಟ್ಟಿ ತೋರಿ ಅಳಿಯುವವು. ಇವು ಹುಟ್ಟುವ ಮೊದಲೂ ದೇವರು, ತೋರಿದಾಗಲೂ ದೇವರು, ಅಡಗಿದಾಗಲೂ ದೇವರು! ನಾಮ ರೂಪಾತ್ಮಕ ಸ್ಥಾವರ. ಒಳ ಸೂಕ್ಷ್ಮ ಚೈತನ್ಯ ಜಂಗಮ. ಸ್ಥಾವರಕ್ಕಳಿವುಂಟು, ಜಂಗಮಕ್ಕೆ ಅಳಿವಿಲ್ಲ. ರೂಢಿಯಲ್ಲಿ ಜಾತಿ ಜಂಗಮ. ಅಯ್ಯ ಆರಾಧ್ಯ ಹಿರೇಮಠ ಚಿಕ್ಕಮಠ ಮಠಪತಿ ಇತ್ಯಾದಿ. ವ್ಯಕ್ತಿಯ ನಾಮ ರೂಪ ಸ್ಥಾವರ, ಅಲ್ಲಿ ಹುದುಗಿದ ಚೈತನ್ಯ ಜಂಗಮ. ದೇಹಭಾವ ಮರೆತ ಚೈತನ್ಯ ಭಾವ ತುಂಬಿದ ಪ್ರತಿ ಜೀವಿ ಜಂಗಮ!ಆತ ನಿತ್ಯ ತೃಪ್ತ!!