
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ
ಗೌರವ
ಗುರೋಃ ಭಾವಃ ಗೌರವಂ=ಗುರು ಹಿರಿಯ ಬಂಧು ಮಿತ್ರ ಹಿತೈಷಿ ವಸ್ತು ಶ್ರೇಷ್ಠ ಎಂದು ತೋರುವ ಸದ್ಭಾವ. ಇದು ಭಾವನಾತ್ಮಕ. ಹಣ ವಸ್ತುಗಳಿಂದ ಅಳೆಯಲಾಗದು. ಗಳಿಸುವುದು ನೀಡುವುದು ಕಷ್ಟ. ಕಳೆಯುವುದು ಕಳೆದುಕೊಳ್ಳುವುದು ಸುಲಭ! ಹೆಸರು ಸಣ್ಣಕ್ಷರ/ ದಪ್ಪಕ್ಷರದಲ್ಲಿರಬಹುದು, ಮೇಲಿರಬಹುದು ಕೆಳಗಿರಬಹುದು. ಹಾರ ಶಾಲು ದೊಡ್ಡ /ದುಬಾರಿಯದ್ದಿರಬಹುದು, ಸಣ್ಣ /ಅಗ್ಗದ್ದಿರಬಹುದು,ಇಲ್ಲದೆಯೂ ಇರಬಹುದು. ಅದು ಮುಖ್ಯವೆನಿಸದು! ಗೌರವ ಭಾವ, ನಡತೆ ಮುಖ್ಯ! ಒಂದು ಸದ್ಭಾವ- ಗೌರವ, ಸಾಮಾನ್ಯನನ್ನು ಮೇಲೆತ್ತಬಹುದು, ಬದುಕ ಕಟ್ಟಬಹುದು! ಸುಧಾಮ ನೀಡಿದ ಒಣ ಅವಲಕ್ಕಿಯಿಂದ ಶ್ರೀ ಕೃಷ್ಣ ತೃಪ್ತ! ಕೃಷ್ಣನ ಕೃಪೆಯಿಂದ ಸುಧಾಮನ ಕುಟೀರವಾಯಿತು ಭವ್ಯ ಮನೆ! ಅರ್ಜುನ ನೀಡಿದ ಗೌರವಕ್ಕಾಗಿ ಕೃಷ್ಣ ಆತನ ಸಾರಥಿ! ಗೌರವ ಕೆಟ್ಟರೆ ಉನ್ನತನೂ ಪತಿತ! ಕೃಷ್ಣನ ಗೌರವಿಸದ ದುರ್ಯೋಧನ ಸೋಲು ಕಂಡ! ಪ್ರತಿ ವಸ್ತು ವ್ಯಕ್ತಿಗೂ ಗೌರವವಿದೆ. ಗುರುತಿಸಿ ಗೌರವಿಸಬೇಕು. ಕಡೆಗಣಿಸಬಾರದು. ಹರಳುಪ್ಪು ಬೆಂಕಿಯ ಕಡ್ಡಿ ಏನೆಲ್ಲ ಮಾಡಬಹುದು! ಗೌರವ ನೀಡಿ ಗೌರವ ಪಡೆ. ಗೌರವ ಹುಡುಕಿ ಹೋಗಬೇಕಿಲ್ಲ. ತಕ್ಕ ಅರ್ಹತೆ ಇದ್ದರೆ ತಾನೇ ಹುಡುಕಿ ಬರುತ್ತೆ! ಗೌರವ ಸಿಗಲಿಲ್ಲವೆಂಬ ಕೊರಗು ಬೇಡ. ಗೌರವವಿಲ್ಲದೆಡೆ ಕರೆದರೂ ಹೋಗಬೇಕಿಲ್ಲ. ಜಗ ದೊಡ್ಡದು. ಯಾರೂ ಯಾರನ್ನೂ ಎಲ್ಲವನ್ನೂ ಖರೀದಿಸಲಾಗದು! ನಿನ್ನ ಗೌರವಿಪ ಜನರಿಹರು! ಕರೆಯದೆಯೂ ಹುಡುಕಿ ಹೋಗಲ್ಲಿಗೆ!!