
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.
ಕಿನ್ನರಿ ತಂತೀ ವಾದ್ಯ. ರಾಗ ತಾಳ ಲಯಾನುಗುಣ ನುಡಿಸಿದ ಕಿನ್ನರಿ ಕಲಾರಸಿಕರ ಹೃನ್ಮನ ಸೂರೆಗೊಳ್ಳುವುದು! ಕೋಣನ ಮುಂದೆ ಕಿನ್ನರಿ ಬಾರಿಸಿದರೆ, ಅದೇನು ಬಲ್ಲುದು ಅದರ ಸ್ವಾದವ? ಕೋಣಮಾತ್ರವಲ್ಲ, ಕೋಣದಂತಿರುವ ಜನರೂ ಅರಿಯರು! ಬೋರ್ಗಲ್ಲ ಮೇಲೆ ನೀರು ನಿಲ್ಲದು, ಬಂಡೆಯ ಮೇಲೆ ಬೀಜ ನಾಟದು! ಪ್ರಯೋಜನಕಾರಿಯಲ್ಲದೆಡೆ ಪ್ರಯತ್ನ ಕೂಡದು. ಬದುಕ ಹಸನಾಗಲು, ಹೃದಯ ಶ್ರೀಮಂತವಾಗಲು ಸುರಿದಿವೆ ಅಗಣಿತ ಅವಕಾಶ. ಶಾಸ್ತ್ರ ವಿದ್ಯೆ ವಿದ್ವಾಂಸರು, ಸಂತ ಮಹಂತರು, ದೇಗುಲ ಮಠ ಗ್ರಂಥಾಲಯ ತೀರ್ಥಕ್ಷೇತ್ರಗಳು, ಸುಂದರ ಹೃದಯ ಸಿರಿವಂತಿಕೆಯ ಜನ ಪಶು ಪಕ್ಷಿ ತರು ಲತೆ ಗಗನ ಜಲ ಮಧುರಗಾನಮಿಳಿತ ನಯನಮನೋಹರ ಪ್ರಕೃತಿಯ ಸೊಬಗು! ಇದ ಸವಿಯಲು ಬೇಕು ಹದ ಮನ ಮೃದು ಹೃದಯ! ಕಠಿಣ ಕಲ್ಲು ಹೃದಯರ ಬದುಕು ಬರೀ ಬರಡು! ಕಿವಿ ಮುಚ್ಚಿ ಆಲಿಸಿ! ನಾದಮಯವೀ ಜಗ. ಎಲ್ಲೆಲ್ಲೂ ಅಡಗಿದೆ ಅವ್ಯಕ್ತ ವಾಣಿ. ಕಣ್ಣೊಂದು ಸಾರುವುದು, ತುಟಿಯೊಂದು ತೋರುವುದು, ಹೃದಯದಲಿ ತುಂಬಿದೆ ಅನಂತ ಭಾವ! ಅದನರಿತು ಬಾಳುವ ನಿಲುವೆಮ್ಮದಿರಲಿ!
ಕಣ್ಮನ ತೆರೆಯೋಣ, ಜಗದ ಸ್ವಾದವ ಸವಿಯೋಣ!!