
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಮಡಕೆ ಮಾಡಲು ಕುಂಬಾರಗೆ ಬೇಕು ವರುಷ, ಒಡೆಯಲು ದೊಣ್ಣೆಗೆ ಸಾಕು ನಿಮಿಷ! ಕಟ್ಟಡ ನಿರ್ಮಿಸಲು ಬೇಕು ವರ್ಷ ಹಲವು, ಕೆಡವಲು ಜೆಸಿಬಿಗೆ ಸಾಕು ಘಂಟೆ ಕೆಲವು! ಬಸ್ ತಯಾರಿಗೆ ಬೇಕು ಶ್ರಮ ಬಂಡವಾಳ, ಸುಡಲು ಸಾಕು ಕ್ಷಣ ಕೆಟ್ಟ ಮನದಾಳ! ಮರ ನೆಟ್ಟು ಬೆಳೆಸಲು ಬೇಕು ಶ್ರಮ ಹಲವಾರು ವರ್ಷ, ತುಂಡರಿಸಲು ಸಾಕು ಬೆರಳೆಣಿಕೆಯ ಕ್ಷಣ! ಮಸಿ ಬಳಿಯಲು, ಕೀರ್ತಿ ಅಳಿಸಲು, ಸಾಕು ಕ್ಷಣ ಹೊತ್ತು , ಅದ ಗಳಿಸಲು ಪಡಬೇಕು ಸದಾ ಪರಿತಾಪ! ಸತ್ಕೃತಿ ಸಚ್ಚಟ ಜೀವರಕ್ಷಣೆ ಬಲು ಕಷ್ಟ, ದುಷ್ಕೃತಿ ದುಶ್ಚಟ ಜೀವಹಾನಿ ಅತಿ ಸುಲಭ! ಕೂದಲ ಕೀಳಬಹುದು, ಹಚ್ಚಿ ಬೆಳೆಸಲಾಗದು! ಜನ್ಮ ನೀಡಿ ಪೋಷಿಸಿ ಬೆಳೆಸುವ ಶ್ರಮ ತಾಯಿ ಬಲ್ಲಳು! ತಂದೆಯೂ ಅರಿಯ! ಕೊಲೆಗಡುಕನೇನು ಬಲ್ಲ ಜೀವ ಬೆಲೆ! ನಿರ್ಮಾಣ ಕಷ್ಟ, ನಿರ್ನಾಮ ಸುಲಭ! ನಿರ್ಮಾಣ ನೀಡುವುದು ಸ್ವಪರ ಸುಖ ಕೀರ್ತಿ! ನಿರ್ನಾಮ ತರುವುದು ಜೈಲು ದುಃಖ ದುರ್ಗತಿ! ಕಷ್ಟ ಇಷ್ಟಪಟ್ಟು ಸುಸಂಸ್ಕಾರ ವ್ಯಕ್ತಿತ್ವ ಗಳಿಸೋಣ. ಮಠ ಮನೆ ಶಾಲೆಯ ಕಟ್ಟೋಣ. ಗಿಡಮರ ಪರಿಸರ ರಚಿಸೋಣ!!
ಹಿಂಸೆ ನಾಶವ ತೊರೆಯೋಣ, ಭವ್ಯ ನಿರ್ಮಿತಿಗೈಯ್ಯೋಣ!!