
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಕಾಸಿಗೆ ತಕ್ಕ ಕಜ್ಜಾಯ.
ರುಬ್ಬಿದ ಅಕ್ಕಿ ಬೆಲ್ಲದಿ ಮಾಡಿದ ಸಿಹಿ ತಿಂಡಿ ಕಜ್ಜಾಯ. ಅಂಗಡಿಯಲಿ ಕಾಸಿಗೆ ತಕ್ಕ ಕಜ್ಜಾಯ. ಉತ್ತಮಕ್ಕೆ ಬೆಲೆ ಹೆಚ್ಚು.ಹೆಚ್ಚಿಗೆ ಹೆಚ್ಚು, ಕಡಿಮೆಗೆ ಕಡಿಮೆ! ಕಡಿಮೆಗೆ ಹೆಚ್ಚು ಬಯಸುವುದು, ಹೆಚ್ಚಿಗೆ ಕಡಿಮೆ ದೊರಕುವುದು ಅನ್ಯಾಯ. ಮನೆಯ ಕಜ್ಜಾಯಕ್ಕೆ ಕಾಸಿಲ್ಲ:ಆದರೆ ಅಕ್ಕಿ ಬೆಲ್ಲ ಅನಿಲ ಅನಲ ನೀರು ವಿದ್ಯುತ್ ಮನೆ ನಿರ್ವಹಣೆ ಎಲ್ಲಕ್ಕೂ ಬೇಕು ಕಾಸು! ಪುಕ್ಕಟೆ ಏನೂ ಸಿಗದು, ನಿಲ್ಲದು, ಜೀರ್ಣವಾಗದು, ಖುಷಿ ತರದು. ಪುಕ್ಕಟೆಯಲ್ಲೂ ಅಡಗಿದೆ ಹಿರಿಶ್ರಮ. ಜಗವಿದು ಎಲ್ಲ ಸಿಗುವ ಪರಮಾತ್ಮನ ಮಳಿಗೆ! ಟೋಟಲ್ ಮಾಲ್, ಬಿಗ್ ಬಜಾರ್ ಎಲ್ಲಾ ಇದರ ಸಣ್ ಬಜಾರ್! ದೇವ ಮಾಲೀಕ, ನಾವು ಖರೀದಿಗರು! ಸೊಪ್ಪು ಧಾನ್ಯ ಬೆಳ್ಳಿ ಬಂಗಾರ ಎಲ್ಲ ಇದೆ. ಎಲ್ಲರಿಗೆ ಬೇಕು ಎಲ್ಲಾ. ಆದರಾಗದು! ನಡೆದಿದೆ ಹಣಕ್ಕೆ ತಕ್ಕ ಖರೀದಿ! ಬಯಕೆ ಸಾಲದು. ಶ್ರಮ ಬಂಡವಾಳ ಬೇಕು! ಶ್ರಮಪಡುವ ಸಾಮರ್ಥ್ಯವಿದೆಯಲ್ಲ! ಸಾಧಿಸೋಣ! ಮತ್ತೊಬ್ಬರ ನೋಡಿ ಉರಿ ಏಕೆ? ನಾವೆಷ್ಟರವರು? ನಾವು ಅವರಿಗೂ ಮೇಲೇರಬಹುದಲ್ಲ! ಶ್ರಮ ಅರ್ಹತೆ ಇರದೆಯೂ ಮೇಲಿರಬಹುದು, ನಿರ್ಲಕ್ಷಿಸಿ! ಅದಲ್ಲ ಮಾದರಿ. ಶ್ರಮ ಅರ್ಹತೆ ಇದ್ದರೂ ದಕ್ಕದಿರಬಹುದು, ಖಿನ್ನತೆ ಬೇಡ! ದೊರಕಿದುದರಲಿ ಇರಲಿ ಸಂತಸ! ಹೃದಯ ಸಿರಿವಂತಿಕೆಯ ಮುಂದೆ ಇನ್ನಾವ ಸಿರಿವಂತಿಕೆ?
ಶಕ್ತರಾಗೋಣ, ತಕ್ಕ ಪ್ರತಿಫಲ ಪಡೆಯೋಣ!!