
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?
ಓಲೆಕಾರ =ಪತ್ರವಿತರಕ. ಬಂದ ಪತ್ರಗಳನ್ನು ಅವರವರಿಗೆ ತಲುಪಿಸುವ ಹೊಣೆ ಆತನದ್ದು. ಪತ್ರ ನಗುವಿನದೋ ಅಳುವಿನದೋ? ಹುಟ್ಟಿನದೋ ಸಾವಿನದೋ? ಸಾಲವಸೂಲಾತಿದೋ ನ್ಯಾಯದ್ದೋ? ಆ ಸುದ್ದಿಯ ಚಿಂತೆ ಅವಗೇಕೆ? ಓದಲಾರ, ತಲೆ ಕೆಡಿಸಿಕೊಳ್ಳಲಾರ! ಅದು ಪತ್ರ ಬರೆದವರ ಪಡೆದವರ ಸುದ್ದಿ. ಆತ ನಿರ್ಲಿಪ್ತ! ಆಸ್ಪತ್ರೆ-ತುರ್ತುವಾಹನ-ಶಾಂತಿವಾಹನ-ಶವಾಗಾರ-ಚಿತಾಗಾರಗಳಲ್ಲಿ ಶವಸಾಗಿಸುವವರು ಸತ್ತವರಿಗಾಗಿ ಕಣ್ಣೀರ ಸುರಿಸರು! ಮಡದಿ ಮಕ್ಕಳ ಸಂಸಾರ ಕಥೆಗೊಡವೆಗೆ ಹೋಗರು! ಸತಿ ಸುತ ಸಾಲಿಗರವರಿವರ ಗೋಳು ಕಣ್ಣೀರ ಶಾಪ ಲೆಕ್ಕಿಸದೇ ಶವ ಸಾಗಿಸುವರು, ಚಿತೆಗಟ್ಟುವರು, ಗುಂಡಿಯೊಳಗಿಳಿಸುವರು! ಲೋಕದೊಳಗವರಂತಿರಲಿ ನಿನ್ನ ನಿರ್ಲಿಪ್ತಭಾವದ ಕರ್ತವ್ಯ ಪಾಲನೆ! ಜಗದಾಗುಹೋಗುಗಳ ವಿಧಿಗರ್ಪಿತಗೊಳಿಸಿ ಧೈರ್ಯದಿ ನುಗ್ಗು ನೀ ಮುಂದೆ. ತೊರೆ ಅವರಿವರ ಸುದ್ದಿ. ಊರ ಉಸಾಬರಿ ಏಕೆ?
ಧೈರ್ಯವ ತಾಳೋಣ, ನಮ್ಮ ಕಾರ್ಯ ಮಾಡೋಣ!!