
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ದಸೂಕ್ತಿ
ಎಲ್ಲೋ ಇರಬೇಕಿತ್ತು!
ಆಗಾಗ ವರು ನನಗೆ ಹೇಳುವರು, “ನೀವು ಎಲ್ಲೋ ಇರಬೇಕಿತ್ತು. ವಿದ್ಯೆ, ಕಾನೂನು ಆಡಳಿತ ಲೋಕಾನುಭವ ಅರಿವು, ಮಾತು ಬರಹ ಜಾತಿ ಏನೆಲ್ಲ ಉಂಟು! ಕುಲಪತಿ ಅಧಿಕಾರಿ ಮಂತ್ರಿ ಜಗದ್ಗುರುವಾಗಬೇಕಿತ್ತು. ಏನಿಲ್ಲದಂತೆ ಇರುವಿಕೆ! ಕಸ, ಅಡುಗೆ, ಜನ-ಹಸು ಸೇವೆ, ಗಾರೆ ಸಹಾಯ, ವಾಹನ ಚಾಲನೆ, ಬರಹ ಓದು ಪಾಠ ಪ್ರವಚನ ಸಂಘಟನೆ ಎಲ್ಲಕ್ಕೂ ನೀವೇ!” ಕಾಲಿಗೊಬ್ಬ ಕೈಗೊಬ್ಬ, ಬೆಳ್ಳಿ ಬಂಗಾರದ ಎತ್ತರದ ಪೀಠ ಸಿಂಹಾಸನ, ಝಗ ಝಗಿಸುವ ವೇಷ ಭೂಷಣ, ಮುಗಿಬಿದ್ದ ಜನ ಇರಬೇಕೆಂಬ ಕೊರಗು ಅವರದ್ದು!ನನ್ನದಲ್ಲ! ನ್ಯಾಯ ನೆಮ್ಮದಿಯ ನೆಲೆ ಸರಳತೆ! ಆಡಂಬರವಲ್ಲ! ಸ್ವಾವಲಂಬನೆ ಪರಿಶ್ರಮದಲ್ಲಿರುವ ಫಲ-ತೃಪ್ತಿ – ನಿರಂಕುಶತೆ, ಪರಾವಲಂಬನೆ ಐಷಾರಾಮಿ ಸೋಮಾರಿತನದಲ್ಲಿಲ್ಲ! ಬಹುತೇಕ ಸ್ಥಾನ ಮಾನಗಳಿಗೆ ಬೇಕು ಜಾತೀಯತೆ ಲಂಚ ಲಾಬಿ ಲಜ್ಜಗೇಡಿತನ! ಜಾತಿವಿದೂರ ನೀತಿನಿಷ್ಠುರನಿಗಿದು ಸಲ್ಲದು! ಅರ್ಹತೆಗೆ ಆಡಂಬರವೇಕೆ? ಗಿಳಿ ನವಿಲು ಕೋಗಿಲೆ ಗುಲಾಬಿ ಮಲ್ಲಿಗೆಗೆ ಆವ ಮಾನ? ಆವ ಪ್ರಶಸ್ತಿ? ಅಮ್ಮ ಕಪ್ಪಗಿರಬಾರದೇ? ಸೋನಿಯಾ ಎನ್ನ ಹೆತ್ತಮ್ಮ ಎನಬಹುದೇ? ಕೆಲಸಗಾರರು ಸಮರ್ಥ ಸುಂದರ ವಿದ್ಯಾವಂತರಾಗಿರಬೇಡವೇ? ಓದಿದ ಸುಂದರ ಸಮರ್ಥರು ಕಸ ಅಡುಗೆ ಶ್ರಮಕೆಲಸ ಮಾಡಬಾರದೇ?ಅಡ್ವಾಣಿ ಗಾಂಧೀಜಿ ಪ್ರಧಾನಿಯಾದರೇ? ಸಿದ್ಧಾರೂಢರು ಜಗದ್ಗುರುವಾದರೇ? ಪಾಲಿಗೆ ಬಂದದ್ದು ಪಂಚಾಮೃತ!