ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ :
ಇಬ್ಬರ ನ್ಯಾಯ, ಮೊರನೆಯವನಿಗೆ ಆಯ!
ನ್ಯಾಯ=ಜಗಳ.ಆಯ=ಲಾಭ.ಇಬ್ಬರ, ಎರಡು ಪಂಗಡಗಳ ಜಗಳ ಮತ್ತೊಬ್ಬರಿಗೆ ಲಾಭ. ಜಗಳವಾಡಿದವರ ಬಾಯಿಗೆ ಮಣ್ಣು! ಗಂಡ ಹೆಂಡತಿ ಜಗಳ ಮಕ್ಕಳಿಗೆ ಲಾಭ. ಇಬ್ಬರಿಂದಲೂ ಓಲೈಕೆ, ಇಬ್ಬರ ಮೇಲೂ ಹಿಡಿತ! ಅವರಿವರ ಜಗಳ ವಕೀಲರಿಗಾಯ್ತು ಸಂಬಳ! ಆ ಪಕ್ಷ ಈ ಪಕ್ಷ ಸ್ಪರ್ಧೆ, ಮತದಾರನಿಗಾಯಿತು ಹಣ ವಸ್ತು ತಿಂಡಿ ತೀರ್ಥಾದಿ ಸುರಿಮಳೆ! ರಾಜ ರಾಜರ ನಡುವಿನ ವೈಮನಸ್ಸು, ಇಂಬಾಯಿತು ಪಾಶ್ಚಾತ್ಯರ ಸಾಮ್ರಾಜ್ಯದ ಸ್ಥಿರ ನೆಲೆಗೆ! ದೊಡ್ಡ ದೊಡ್ಡವರ ಗುಟ್ಟು ರಟ್ಟಿನ ಕೀಳುಮೇಲುಗಳ ಹಗರಣಗಳಾಟ, ಮಾಧ್ಯಮಗಳಿಗೊದಗುವುದು ಮೃಷ್ಟಾನ್ನ ಭೋಜನ! ಜನಕೆಲ್ಲ ಸಿಗುವುದು ಖರ್ಚಿಲ್ಲದ ಮೋಜು! ಜಗಳವು ಗೌರವ ಸಮಯ ಆಸ್ತಿ ಆರೋಗ್ಯ ಸಂಬಂಧ ಪ್ರಾಣ ಕಳೆಯುವುದು. ನ್ಯಾಯ ಬರದಂತೆ ಇರಲಿ ಎಚ್ಚರ! ಬಂದರೆ ಬುದ್ಧಿವಂತ ಹಿರಿಯರ ಮಾರ್ಗದರ್ಶನಕ್ಕೆ ಇರಲಿ ಒಪ್ಪಿಗೆ ಗೌರವ. ತಲೆ ಬಾಗಲಿ, ದೋಷ ದೂರಾಗಲಿ, ಹೊಂದಿಕೆ ನಡೆಯಾಗಲಿ, ಮನುಷ್ಯತ್ವದ ಉಳಿವಾಗಲಿ!
ಜಗಳವನಳಿಯೋಣ, ನಾವು ಹೊಂದಿ ಬಾಳೋಣ!!
ಇಬ್ಬರ ನ್ಯಾಯ, ಮೊರನೆಯವನಿಗೆ ಆಯ!
Share