ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಆಗುವುದೆಲ್ಲ ಒಳ್ಳೆಯದಕ್ಕೆ.
ಅನಗತ್ಯ ತೊಂದರೆ ನಿರಾಶೆಯುಂಟಾಗಿ ಕೊನೆಯಲಿ ಒಳಿತುಂಟಾದಾಗ ಆಡುವ ಮಾತಿದು. ಸಜ್ಜನ ಸತ್ಕಾರ್ಯಗಳಿಗೆ ಅನೇಕ ಅಡ್ಡಿಯುಂಟಾಗಿ ಅಂತ್ಯದಲಿ ಜಯ ಪ್ರಾಪ್ತಿ ಸಹಜ. ಅಡ್ಡಿ ಆತಂಕಾದಿಗಳು ವ್ಯಕ್ತಿಯ ಸತ್ತ್ವ ಮಹಿಮೆಗಳನು ಹಿರಿದಾಗಿಸುತ್ತವೆ! ಆಗಲಿದ್ದ ಅನಾಹುತಗಳನ್ನು ತಪ್ಪಿಸುತ್ತವೆ! ಬಸ್ಸು ತಪ್ಪಿಸಿಕೊಂಡವನಿಗೆ ಸುದ್ದಿ ಬಂತು, ಬಸ್ಸು ನದಿಗೆ ಬಿತ್ತು! ಒಂದು ಪಕ್ಷದ ದೌರ್ಜನ್ಯ ಮತ್ತೊಂದು ಪಕ್ಷಕ್ಕೆ ಅನುಕಂಪ ಜಯ! ಕೌರವರ ದೌರ್ಜನ್ಯ, ಪಾಂಡವರಿಗೆ ಜಯ! ರಾಜ ಮಂತ್ರಿ ಕಾಡಲಿ ಹೋಗುವಾಗ ಕಲ್ಲು ತಾಗಿ ರಾಜ ಗಾಯಗೊಂಡ. ಮಂತ್ರಿ ಒಳಿತಿಗೆಂದ!ರಾಜ ಮಂತ್ರಿಯನು ಬಾವಿಗೆ ತಳ್ಳಿದ. ಕೈಗೆ ಸಿಕ್ಕ ರಾಜನನ್ನು ಕಳ್ಳರು ಬಲಿಕೊಡಲೆಳೆದರು. ಊನ ನೋಡಿ ಬಿಟ್ಟರು! ಊನವಿರದಿರೆ ರಾಜ ಬಲಿ! ಬಾವಿಗೆ ಬೀಳದಿರೆ ಮಂತ್ರಿ ಬಲಿ! ಆದದ್ದೆಲ್ಲ ಒಳಿತೇ ಆಯಿತೆಂಬ ಪುರಂದರದಾಸರ ವಾಣಿ ಮನನೀಯ. ತೊಂದರೆಯನ್ನು ಸಹಿಸೋಣ, ಒಳ್ಳೆಯದನ್ನು ಕಾಯೋಣ!!