ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಆಕಳು ಕಪ್ಪಾದರೆ ಹಾಲು ಕಪ್ಪೇ?
ವೈವಿಧ್ಯದಲ್ಲೂ ಏಕ ಸಮಾನತೆ ತೋರಿ ಸಾರುವ ಮಾತಿದು. ವಿಭಿನ್ನ ಆಕಳ ಬಣ್ಣ ಬಗೆ ಬಗೆ, ಹಾಲು ಎಲ್ಲ ಬಿಳಿ ಬಿಳಿ, ಸತ್ತ್ವವೆಲ್ಲ ಒಂದೇ. ಕಬ್ಬು ಡೊಂಕು, ಸಿಹಿ ಒಂದು. ಮೈ ಬಣ್ಣ ಕಪ್ಪು ಬಿಳಿ ಕೆಂಪು ಮತ್ತೊಂದು, ಎಲ್ಲರ ರಕ್ತ ಕೆಂಪೇ ಕೆಂಪು! ಗಂಡು ಹೆಣ್ಣು ಮುಸ್ಲಿಂ ಹಿಂದು ಕ್ರೈಸ್ತ ಹೀಗೆ ಮನುಷ್ಯ ಬೇರೆ, ಒಳಗಿನ ಮನುಷ್ಯತ್ವ ಒಂದೇ ಒಂದು! ಜಾತಿ ಜಾತಿಗರ ಜ್ಯೋತಿ ಬೆಳಗದೇ? ಮಾನವ ಪಶು ಪಕ್ಷಿ ಜಂತು ಕ್ರಿಮಿ ಕೀಟ ಸಕಲಕೆ ಸುಖದುಃಖ ವೇದನೆ ಒಂದೇ ಒಂದು! ಕುರುಡ ಕುಂಟ ಕುಬ್ಜ ಬಡವ ದೀನ ವೃದ್ಧ ಮಹಿಳೆ ಶಿಶುಗಳೆಲ್ಲರಲಿ ಇರಲಿ ಪ್ರೀತಿ ಸಮತೆಯಿಂದ. ಒಳಸತ್ತ್ವ ಗುಣ ಸಾಮರ್ಥ್ಯ ಪ್ರತಿಭೆ ಲೆಕ್ಕಿಸದ ಹೊರನೋಟವಳೆವ ನರ ಪಾಮರ! ಜನಕಸಭೆಗೆ ಬಂದ ಹತ್ತು ವರ್ಷದ ಮೇಧಾವಿ ಅಷ್ಟಾಂಗವಿಕಲ ಅಷ್ಟಾವಕ್ರನ ಕಂಡು ಸಭಿಕರು ಹಲ್ಲು ಕಿರಿಯಲವರನು ಮಾಂಸಜಪಿಸುವ ಹದ್ದುಗಳೆಂದ! ಎಲ್ಲೆಡೆ ದಿವ್ಯತೆ ಅರಿಯೋಣ, ಭೇದವನಳಿದು ಬಾಳೋಣ!!