
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಅಳಿಯ ಮನೆಯ ತೊಳಿಯ.
ಅಳಿಯನಾದವನು ಮಾವನ ಮನೆಯ ಸ್ವಚ್ಛ ತೊಳೆಯುವನು ಖಾಲಿಗೊಳಿಸುವನು ಎಲ್ಲ ಬಾಚುವನು. ವರದಕ್ಷಿಣೆ ಮದುವೆ ಖರ್ಚು ಆ ಈ ನೆಪದಲಿ ಹಣ ಆಸ್ತಿ ವಸ್ತ್ರ ಆಭರಣ ವಾಹನ ವಗೈರೆ ಕೀಳುವನು ಸುಲಿಗೆ ಮಾಡುವನು! ಇಲ್ಲದಿರೆ ಹೆಂಡತಿಗೆ ಪರಿ ಪರಿ ಹಿಂಸೆ ನಿಂದನೆ ತವರುಮನೆಯ ವಾಸ! ಗಂಡನ ಮನೆಯ ಗಂಡು ಹೆಣ್ಣುಗಳೂ ಅಲ್ಲಿ ಶಾಮೀಲು! ಪತಿ ಕುಡುಕನಾದರಂತೂ ಕಥೆ ಮುಕ್ತಾಯ! ಅವ ಕೆಲಸ ಬಿಟ್ಟ ಸೋಮಾರಿ! ನಿತ್ಯ ಕುಡಿಯಲು ಹೆಂಡತಿ ದುಡಿದಾದರೂ ಹಣ ನೀಡಬೇಕು! ಹೆಣ್ಣು ಹೆತ್ತವರ ಗೋಳು ನೋಡಲಾಗದು! ಕೇಳಲಾಗದು! ಮಗಳ ಬಾಳು ಅತಂತ್ರವಾಗಬಾರದೆಂಬ ಕಕ್ಕುಲತೆಗೆ ಜೋತು ಬಿದ್ದು ಸಾಲ ಮಾಡುವರು! ಮನೆ ಆಸ್ತಿ ಮಾರುವರು! ನೊಂದವರ ಕಣ್ಣೀರು ವ್ಯರ್ಥವಾಗದು! ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅದು ತನ್ನ ಸಹೋದರಿ / ಮಗಳ ಜೀವನಕ್ಕೆ ಒಕ್ಕರಿಸಿದಾಗ ಅರಿವಾಗುತ್ತೆ! ಸಮಯ ಜಾರಿರುತ್ತೆ! ಅಜ್ಞಾನ ದುರಾಶೆ ಸಂಕುಚಿತತೆ ಇದಕೆಲ್ಲ ಕಾರಣ. ಎಲ್ಲರೂ ತನ್ನಂತೆ ಎಂಬ ವಿಶಾಲ ಹೃದಯಿಗಳಿಗೆ, ಜೀವನ ನಶ್ವರವೆಂದು ಅರಿತವರಿಗೆ ಈ ಸಮಸ್ಯೆಯೇ ಇಲ್ಲ! ಅಂತೆಯೇ ಎಲ್ಲ ಅಳಿಯಂದಿರೂ ಹೀಗಲ್ಲ! ಈ ಶೋಷಣೆಗೆ ಕಡಿವಾಣ ಹಾಕಲೆಂದೇ ಜಾರಿಯಾಯಿತು ವರದಕ್ಷಿಣೆ ದೌರ್ಜನ್ಯ ತಡೆ ಕಾನೂನು! ಆದರಿದು ಪುರುಷ ಶೋಷಣೆಗೂ ಮಹಿಳೆಯ ಅಸ್ತ್ರವಾದುದು ವಿಪರ್ಯಾಸ!!