ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಅರಿವೇ ಗುರು.
ಅರಿವು ತಿಳಿವು ದೊಡ್ಡದು ಗುರು ದೊಡ್ಡವ. ಅಜ್ಞಾನ ಕಳೆ ಕೊಳೆ ಕತ್ತಲೆ ಕಳೆದು, ಸುಜ್ಞಾನ ಬೆಳಕ ಬೀಜ ಬಿತ್ತಿ ಬೆಳಗುವನು ಸದ್ಗುರು. ಹಾಲಿನಂತೆ ವಿಷ ಕುಡಿಯಲಾಗದು. ಬೆಣ್ಣೆಯಂತೆ ಬೆಂಕಿ ನುಂಗಲಾಗದು. ಒಳಿತು ಕೆಡುಕುಗಳ ಅರಿವು ಇದರ ಮೂಲ. ಅರಿವಿಲ್ಲದ ಬಾಳು ಗೋಳು, ಯಾತನೆಯ ಗೂಡು!ಅರಿವಿರಬೇಕು ಸಕಲಕೂ ಅದು ದಾರಿ ತೋರುವುದು. ತಲೆ ಬಾಗಬೇಕು ಅರಿವಿಗೆ ಅರಿವು ತೋರುವ ಗುರುವಿಗೆ. ಶಂಕರ ಬಸವ ಸಿದ್ಧ ವಿವೇಕ ಸತ್ಪುರುಷರೂ ಶಿಷ್ಯರಾಗಿ ಗುರುವಾದವರು.ಕಿಂಕರನಾದವನು ಶಂಕರನಾಗುವನು! ನರ ಪ್ರಾಣಿ ಪಕ್ಷಿ ಪ್ಯಕೃತಿಯೆಲ್ಲ ಗುರುವಾಗಬಲ್ಲುದು! ಹಿಂದೆ ಗುರುವಿದ್ದು ಮುಂದೆ ಗುರಿ ಇದ್ದರೆ ಬದುಕು ಬಂಗಾರ, ಯಶಸ್ಸು ಶೃಂಗಾರ! ಓದು ಬರಹ ಬಾರದೆಯೂ, ಅಲ್ಲಿಲ್ಲಿ ಅಲೆಯದೆಯೂ ಒಂದೆಡೆ ಇದ್ದರೂ, ಆಗುಹೋಗುಗಳ ಗಮನಿಸುವ, ಮೌನದಿ ಒಳಮುಖದಿ ಯೋಚಿಸುವ ಸೂಕ್ಷ್ಮ ಮನದಲೂ ಹೊರಸೂಸುವುದು ಅರಿವಿನ ಸಾಗರ! ಕರ್ಮಯೋಗಿಗೆ, ಭಕ್ತಿಭಾವುಕಗೆ, ಜ್ಞಾನಮಾರ್ಗಿಗೆ ಪುಟಿದೇಳುವುದು ಅರಿವಿನ ಬುಗ್ಗೆ!
ಅರಿವನು ಹೊಂದೋಣ, ಬಾಳಿನ ಕತ್ತಲೆ ಕಳೆಯೋಣ.
ಗುರಿಯನು ತಲುಪುತ, ಶಾಶ್ವತ ತೃಪ್ತಿಯ ನಾವು ಪಡೆಯೋಣ.