ವೇದ ಸುಳ್ಳಾದರೂ ಗಾದೆ ಸುಳ್ಳಾಗದು

Share

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ

‌‌‌‌‌           ಸಿದ್ಧಸೂಕ್ತಿ :
ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

ಹತ್ತಾರು ಸಾವಿರ ವರ್ಷಗಳ ಹಿಂದೆ ತಪೋಮಗ್ನ ಋಷಿಮುಖದಿಂದ ಹೊರಹೊಮ್ಮಿದ ದಿವ್ಯ ವಾಣಿ ವೇದ. ಋಗ್ವೇದ ಯಜುರ್ವೇದ ಸಾಮವೇದ ಮೂರು ಪ್ರಾಚೀನ ವೇದಗಳು. ಧಾರ್ಮಿಕ ಆಧ್ಯಾತ್ಮಿಕ ವಿಷಯ ಇಲ್ಲಿದೆ. ಅಥರ್ವವೇದ ನಾಲ್ಕನೇ, ಅನಂತರದ್ದು. ಆಯುರ್ವೇದದಂಥ ಲೌಕಿಕ ವಿಷಯ ಇಲ್ಲಿದೆ. “ವೇದಗಳು ಚತುರ್ಮುಖ ಬ್ರಹ್ಮನ ಮುಖದಿಂದ ಬಂದವು, ಪುರುಷ ರಚಿತವಲ್ಲ. ಅವು ನಿತ್ಯ. ಒಂದಕ್ಷರ ಕದಲಿಸಲಾಗದು” ಇದು ಸಂಪ್ರದಾಯ ವಾದ. “ಮಾನವರಾದ ಋಷಿಗಳು ವೇದಕರ್ತೃಗಳು. ಜ್ಞಾನ ನಿಂತ ನೀರಲ್ಲ. ಬದಲಾಗಬಲ್ಲುದು. ವೇದಗಳೂ ಪರಿಷ್ಕಾರ ಯೋಗ್ಯ ” ಇದು ನಮ್ಮ ಆಧುನಿಕ ಮತ. ಆಳಜ್ಞಾನದಿಂದ ಆರಂಭಿಕ ಜ್ಞಾನ ಹಿಮ್ಮೆಟ್ಟಬಹುದು.” “ಪುತ್ರಕಾಮಃ ಪುತ್ರಕಾಮೇಷ್ಟಿಂ ಕರಿಷ್ಯೇ =ಮಗನ ಬಯಸಿ ಮಗನೀಡುವ ಯಾಗ ಮಾಡಬೇಕು” ಇದು ವೇದ ಮಾತು. ಈ ಯಾಗ ಮಾಡಿದವರಿಗೆಲ್ಲ ಮಗ ಹುಟ್ಟಲಾರ. ಹೀಗೆ ವೇದ ಸುಳ್ಳಾದರೂ, ಗಾದೆ ಸುಳ್ಳಾಗದು! ವೇದಾನಂತರ ಕಾಲದ ಜನರ ಅನುಭವದ ಮಾತು ಗಾದೆ. ಇದು ಸದಾ ಸತ್ಯ. ಅವರವರಿಗೆ ಅವರವರದೇ ಹೆಚ್ಚು! ಸತ್ಯ ನ್ಯಾಯದಿಂದ ದೂರಾದವರಿಗೆ ವೇದ ಗಾದೆಗಳೆರಡೂ ಸುಳ್ಳು! ನೋಡಿದರೆ- ಕೇಳಿದರೆ, ಕಾಣುವುದು-ಕೇಳುವುದು. ಹಿಂತಿರುಗಿ ಕಿವಿ ಮುಚ್ಚಿ ನಿಂತರೆ? ಕಾಣದು, ಕೇಳದು! ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಬಳಿ ಸಾರಿದರೆ, ಕಲ್ಲು ಮುಳ್ಳಿನ ಒರಟು! ಬೆಟ್ಟವನ್ನೇ ಅಂದಗೊಳಿಸಿದರೆ, ಬೆಟ್ಟವೇ ಹಿತವೆಂದವರಿಗೆ, ಬಳಿ ಸಾರಿದರೂ ನುಣ್ಣಗೆ!
ವೇದಗಾದೆಗಳರಿಯೋಣ, ಅನುಭವ ಸಾರವ ಸವಿಯೋಣ!!

Girl in a jacket
error: Content is protected !!