
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ.
ನೆಮ್ಮದಿ ಬೇಕು. ನಿದ್ದೆ ನೀಡುವುದು ನೆಮ್ಮದಿ! ನಿದ್ದೆ ಹತ್ತುವುದು ಎಲ್ಲ ಬಿಟ್ಟಾಗ! ಬಿಡದಿದ್ದವರಿಗೆ ಸುಖ ನಿದ್ದೆ ಎಂಬುದು ಕನಸಿನ ಮಾತು! ಪ್ರಕ್ಷುಬ್ಧ ಮನಸ್ಸಿನ ವಿರುದ್ಧ ವಿಭಿನ್ನ ನೂರಾರು ಆಲೋಚನೆ, ಬೇಕು ಬೇಡ ದ್ವಂದ್ವ ಕೊರಗುಗಳು ಕಿವಿಯೊಳಗೆ ಸೇರಿದ ಹುಳುವಿನಂತೆ! ಕಿವಿಗೆ ಅಪ್ಪಳಿಸುವ ನಾನಾ ಹಕ್ಕಿಗಳ ಕಿಲ ಕಿಲ ಗೊರ ಗೊರ ಕಿರಚುವ ಕೂಗಿನಂತೆ! ಒಂದು ಆಲೋಚನೆ ಗಿಳಿಯಂತೆ ಸುಂದರ! ಮತ್ತೊಂದು ಅಣಕಿಸುವ ಅಸಹ್ಯಕರ ಗೂಗೆಯಂತೆ! ಒಂದು ಕಾಗೆಯ ಧ್ವನಿ ಕರ್ಕಶದಂತೆ, ಮತ್ತೊಂದು ಕೋಗಿಲೆಯ ಮೃದು ಮಧುರ ನಿನಾದದಂತೆ! ಒಂದು ಮೇಲಿದ್ದರೂ ಕೆಳಮಾಂಸದೃಷ್ಟಿಯ ಹದ್ದಿನಂತೆ, ಮತ್ತೊಂದು ನಯನ ಸೊಬಗಿನ ನವಿಲಿನ ನೃತ್ಯದಂತೆ! ಇವು ಒಟ್ಟು ಸೇರಿದರೆ ಅಬ್ಬರಿಸುವವು, ಗೋಳಿಕ್ಕುವವು! ನಿದ್ದೆ ತಾರವು! ಈ ಆಲೋಚನೆಗಳು ಇಲಿ ಹುಲಿ ಸಿಂಹ ಕರಡಿ ಹಾವು ಮುಂಗಸಿ ಚೇಳುಗಳಿದ್ದಂತೆ! ಹಾವು ಮುಂಗಸಿ ಸೇರಿದರೆ ಕಾಳಗ ನಡೆಯದೇ? ಮನಸ್ಸು ಚಂಚಲದ ಗೂಡಾದರೆ ಅದು ಎತ್ತೆಂದರತ್ತ ನೆಗೆಯುವ ಮರ್ಕಟ! ನಿಲ್ಲಿಸುವುದು ದುಸ್ಸಾಧ್ಯ! ಸತ್ಸಂಗ ಸದ್ವಿಚಾರ ಧ್ಯಾನ ಜಪ ತಪ ವೈರಾಗ್ಯಗಳಿಂದ ಮಾತ್ರ ಪರಿವರ್ತಿಸಿ ಹಿಡಿತ ಸಾಧಿಸಬಹುದು. ಆಗ ಮನಶ್ಶಾಂತಿ! ಮನದ ಲಯವೇ ನಿದ್ದೆ!