ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಆಳಾಗಿ ದುಡಿ, ಅರಸನಾಗಿ ಉಣ್ಣು.
ಸೇವಕ ಮಂತ್ರಿ ಯಾರೇ ಇರಲಿ, ದುಡಿಮೆ ಬದುಕಿಗೆ ಶೋಭೆ! ದುಡಿಸಿಕೊಳ್ಳುವವರು ದುಡಿಯಬಾರದು, ಅದು ತಮ್ಮ ಗೌರವಕ್ಕೆ ಧಕ್ಕೆ ಎಂದು ಭಾವಿಪರು ಹಲವರು. ಅನಿವಾರ್ಯತೆ ಇಲ್ಲದೆಯೂ ಮನೆಗೆಲಸದಾಕೆ! ತಾನುಂಡ ತಟ್ಟೆ, ಉಟ್ಟ ಬಟ್ಟೆ, ತೊಳೆಯುವುದವಮಾನ! ಮಲಗೇಳುವ ಹಾಸಿಗೆ ಹಾಸಿ ಮಡಚಿ ಸುತ್ತಲು, ಇರುವ ನೆಲ ಶುಚಿಗೊಳಿಸಲು, ತನ್ನದೇ ಹಸು ಎಮ್ಮೆ ಎತ್ತುಗಳ ಶೆಗಣಿ ಎತ್ತಿ ಮೈತೊಳೆದು ಮೇವು ನೀರುಣಿಸಲು ಕೆಲಸದಾಳೇ ಬೇಕು! ಮೈ ಬಗ್ಗದು! ಬೆವರು ಹರಿಯದು! ತಿಂದದ್ದು ಕರಗದು! ನಿದ್ದೆ ಹತ್ತದು! ರೋಗದ ದೇಹಕ್ಕೆ ಶುಚಿ ರುಚಿಯ ಅನುಭೋಗವೆಲ್ಲಿ? ಕೊನೆಗೆ ಮಾಡಿದ್ದು ಇದ್ದದ್ದು ಎಲ್ಲಾ ಆಳಿಗೆ ನೈವೇದ್ಯ! ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ! ದುಡಿದ ಹಸಿದ ಕಟ್ಟುಮಸ್ತಾದ ಆಳಿಗೆ ಭಾಗ್ಯದ ಬಾಗಿಲು ತೆರೆದಂತೆ. ಸಿಕ್ಕಿದ್ದನ್ನೆಲ್ಲಾ ಚಪ್ಪರಿಸಿ ಸುಖಿಸುವನು/ಳು. ಅರಸತನದಲಿ ನಮ್ಮ ಸುಖವನು ನಾವುಣ್ಣಲು ಆಳಾಗಿ ದುಡಿಯಲೇಬೇಕು!
ಸ್ವಾವಲಂಬಿಗಳಾಗೋಣ, ಪರಾವಲಂಬನ ಕಳೆಯೋಣ!!