ಬಜೆಟ್ ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿ: ನಿರ್ಮಲಾ ಸೀತಾರಾಮನ್ ಗೆ  ಡಿ.ಕೆ. ಶಿ ಪತ್ರ

Share

ಬಜೆಟ್ ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿ: ನಿರ್ಮಲಾ ಸೀತಾರಾಮನ್ ಗೆ  ಡಿ.ಕೆ. ಶಿ ಪತ್ರ

by ಕೆಂಧೂಳಿ

ಬೆಂಗಳೂರು, ಜ.25-ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಪಿಆರ್ ಆರ್ ಬಿಸಿನೆಸ್ ಕಾರಿಡಾರ್, ನೀರು ಸರಬರಾಜು ಸೇರಿ ಅನೇಕ ಪ್ರಮಖ ಯೋಜನೆ ಕೈಗೊಂಡಿದ್ದು, ಈ ಯೋಜನೆಗಳಿಗೆ 2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಅನುದಾನ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿದ್ದಾರೆ. ಕಮಲ

ಮುಂಬರುವ ಫೆಬ್ರವರಿ 1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಈ ಬಜೆಟ್ ನಲ್ಲಿ ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾಗಿರುವ ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಪ್ರಗತಿ ಹಾಗೂ ಬಂಡವಾಳ ಹೂಡಿಕೆ ಆಕರ್ಷಣೆಯ ತಾಣವಾಗಿ ಬೆಳೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಬೆಂಗಳೂರು ಜಾಗತಿಕ ನಗರವಾಗಿ ರೂಪುಗೊಂಡಿದ್ದು, ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸಿ, ಆರ್ಥಿಕ ಪ್ರಗತಿಗೆ ನೆರವಾಗಿದೆ. ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಪರಿಣಾಮ, ನಗರದ ಜನಸಂಖ್ಯೆ 1.50 ಕೋಟಿ ಸನಿಹದಲ್ಲಿದೆ. ಹೀಗಾಗಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಮಾಡಿ ಬೆಂಗಳೂರನ್ನು ದೇಶದ ಸಿಲಿಕಾನ್ ವ್ಯಾಲಿ ಎಂಬ ಹಿರಿಮೆ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದ್ದು, ಮುಂಬರುವ ಬಜೆಟ್ ನಲ್ಲಿ ಈ ಯೋಜನೆಗಳಿಗೆ ಪೂರಕವಾಗಿ ಅನುದಾನ ನೀಡಬೇಕು” ಎಂದು ತಿಳಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ

ಭೂಮಿಯ ಕೊರತೆಯಿಂದಾಗಿ ಬೆಂಗಳೂರಿನಲ್ಲಿರುವ ಹಾಲಿ ರಸ್ತೆಗಳ ಅಗಲೀಕರಣ ಕಷ್ಟವಾಗಿದೆ. ಹೀಗಾಗಿ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಹೆಚ್ ಎಸ್ ಆರ್ ಬಡಾವಣೆಯ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ಉತ್ತರ- ದಕ್ಷಿಣ 18.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹15 ಸಾವಿರ ಕೋಟಿ ವೆಚ್ಚವಾಗಲಿದೆ.

ಕೆ.ಆರ್ ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್ ವರೆಗೂ 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ ವೆಚ್ಚವಾಗಲಿದೆ.

ಈ ಯೋಜನೆಗಾಗಿ ರಾಜ್ಯ ಸರ್ಕಾರ 19 ಸಾವಿರ ಕೋಟಿ ಮೌಲ್ಯದ ಡಿಪಿಆರ್ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿದೆ” ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೋದ ಮೂರನೇ ಹಂತದ ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಯಶಸ್ವಿ ಹಿನ್ನೆಲೆಯಲ್ಲಿ ಮೆಟ್ರೋ ನಾಲ್ಕನೇ ಹಂತದ ಯೋಜನೆಯನ್ನು ಡಬಲ್ ಡೆಕ್ಕರ್ ಮೂಲಕ ನಿರ್ಮಿಸಲು ತೀರ್ಮಾನಿಸಲಾಗಿದೆ.

ಜೆ.ಪಿ ನಗರದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ 45 ಕಿ.ಮೀ ಉದ್ದದ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ₹8916 ಕೋಟಿ ಅಗತ್ಯವಿದೆ” ಎಂದು ತಿಳಿಸಿದ್ದಾರೆ.

17 ಮೇಲ್ಸೇತುವೆ, 300 ಕಿ.ಮೀ ಬಫರ್ ವಲಯ ರಸ್ತೆ

“ಇವುಗಳ ಜತೆಗೆ ನಗರದ ಸಂಚಾರಿ ದಟ್ಟಣೆ ಇರುವ 11 ಜಂಕ್ಷನ್ ಗಳಲ್ಲಿ 99.50 ಕಿ.ಮೀ ನಷ್ಟು 17 ಮೇಲ್ಸೇತುವೆ ನಿರ್ಮಾಣ ಅಗತ್ಯವಿದ್ದು, ಇದಕ್ಕಾಗಿ ₹12 ಸಾವಿರ ಕೋಟಿ ಹಣ ಬೇಕಾಗಿದೆ. ಪ್ರಮುಖ ನದಿ ಹಾಗೂ ದೊಡ್ಡ ಕೆರೆಗಳು ಹಾಗೂ ರಾಜಕಾಲುವೆ ಪಕ್ಕದ ಬಫರ್ ಪ್ರದೇಶಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಈ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ₹3000 ಕೋಟಿ ಅಗತ್ಯವಿದೆ” ಎಂದು ತಿಳಿಸಲಾಗಿದೆ.

“ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಾವುಗಳು ಬೆಂಗಳೂರಿನ ಈ ಪ್ರಮುಖ ಯೋಜನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಅನುದಾನ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

Girl in a jacket
error: Content is protected !!