ರಾಜ್ಯದ ಎಲ್ಲಾ ರೈತರ ಮನೆಗೂ ನಿರಂತರ ವಿದ್ಯುತ್- ಕೆ.ಜೆ ಜಾರ್ಜ್ 

Share

ರಾಜ್ಯದ ಎಲ್ಲಾ ರೈತರ ಮನೆಗೂ ನಿರಂತರ ವಿದ್ಯುತ್- ಕೆ.ಜೆ ಜಾರ್ಜ್ 

by ಕೆಂಧೂಳಿ

ಬಾಗಲಕೋಟೆ,ಜ,24-ರಾಜ್ಯದ ಹೊಲಗದ್ದೆಗಳಲ್ಲಿನ ರೈತರ ಮನೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಯೋಜಿಸಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.

ಬಾಗಲಕೋಟೆಯ ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಇಂಧನ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಪ್ರವಾಹ ಪೀಡಿತ ಕುಟುಂಬಗಳು ತಮ್ಮ ಹೊಲಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದು, ಈ ಮನೆಗಳಿಗೆ ನಿರಂತರ ವಿದ್ಯುತ್ ನೀಡುವುದು ಅಗತ್ಯವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವುದು ಮತ್ತು ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸದ್ಯ ಫಾರ್ಮ್‌ಹೌಸ್‌ಗಳಿಗೆ ಏಳು ಗಂಟೆಗಳ 3-ಫೇಸ್ ವಿದ್ಯುತ್ ಸಿಗುತ್ತಿದೆ. ದಿನದ ಉಳಿದ ಅವಧಿಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ ಒಂದು ತಿಂಗಳು ಮಾತ್ರ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಆದರೆ, ಜನರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಪಂಜಾಬ್‌ ಹಾಗೂ ಉತ್ತರ ಪ್ರದೇಶಗಳ ಜತೆ ವಿದ್ಯುತ್‌ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂಬರುವ ಬೇಸಿಗೆಯಲ್ಲೂ ಜನರಿಗೆ ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ದವಾಗಿದೆ ಎಂದರು.

ಸಭೆಯಲ್ಲಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, ತಮ್ಮ ಕ್ಷೇತ್ರದಲ್ಲಿ 220 ಕೆವಿ ಸಬ್ ಸ್ಟೇಷನ್ ಸ್ಥಾಪಿಸುವಂತೆ ಸಚಿವರಿಗೆ ಮನವಿ ಮಾಡಿದರು.

‘ಹುನಗುಂದ ಮತಕ್ಷೇತ್ರದ ಮರೋಳ್-ರಾಮತಾಳ ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆಯಿಂದಾಗಿ 220 ಕೆವಿ ಸಬ್ ಸ್ಟೇಷನ್ ಅವಶ್ಯವಿದ್ದು, ಮಂಜೂರಾತಿ ದೊರೆತಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಳಕಲ್ ಪಟ್ಟಣದಲ್ಲಿ 6 ಎಕರೆ ಜಾಗದಲ್ಲಿ ನಿರ್ಮಿಸುತ್ತಿರುವ ಅತ್ಯಾಧುನಿಕ ಕ್ರೀಡಾ ಮೈದಾನದ ಮೇಲಿನ ಹೈವೋಲ್ಟೇಜ್ ಲೈನ್ ಕ್ರಾಸಿಂಗ್ ತೆಗೆಸಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಕಾಶಪ್ಪನವರ್ ಹೇಳಿದರು.

ಸಂಸದ ಪಿಸಿ ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸ್ವಾಮಿ ಭಾಂಡಗೆ ಹಾಗೂ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Girl in a jacket
error: Content is protected !!