ಅನುದಾನದ ಸದ್ಬಳಕೆಗೆ ಶಿವರಾಜ್ ಸಿಂಗ್ ಚೌಹಾಣ್ ಸಲಹೆ

Share

 

ಅನುದಾನದ ಸದ್ಬಳಕೆಗೆ ಶಿವರಾಜ್ ಸಿಂಗ್ ಚೌಹಾಣ್ ಸಲಹೆ

ಬೆಂಗಳೂರು,ಜ,18- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದ ಸದ್ಬಳಕೆ ಆಗಬೇಕಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.
ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವರು ಇಂದು ರಾಜ್ಯದ ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರ ಜೊತೆ ಕೇಂದ್ರ ಸರಕಾರದ ಯೋಜನೆಗಳ ಸಾಧನೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುದಾನ ಕೇಳದೇ ಇದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ ಎಂದರು.
ಪ್ರತಿ ಬಡವನಿಗೂ ಮನೆ ಸಿಗಬೇಕು ಎಂಬುದು ಮೋದಿಯವರ ಸಂಕಲ್ಪ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ಸೆಪ್ಟೆಂಬರ್‍ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದೆವು. ಅನುದಾನವನ್ನೂ ಕೊಟ್ಟಿದ್ದೆವು. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಇರುವ ಗುರಿ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಬಡವರ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆ ನಮ್ಮದು. ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶ ಈಡೇರಿಸಬೇಕಿದೆ. ಅದಕ್ಕಾಗಿ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಆತ್ಮ ಯೋಜನೆಯಡಿ ಹೆಚ್ಚುವರಿ ಸಿಬ್ಬಂದಿ ನೀಡಲು ಒಪ್ಪಿಗೆ ಕೊಡಲಾಗಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ನಮ್ಮದು. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕ ಎಂಬುದು ನಮ್ಮ ಚಿಂತನೆ ಎಂದು ವಿವರಿಸಿದರು. ರಾಜ್ಯ ಸರಕಾರವು ಸಕಾಲದಲ್ಲಿ ಅನುದಾನವನ್ನು ಬಳಸಿ; ಬಳಕೆ ಸಂಬಂಧಿತ ದೃಢಪತ್ರ ಕಳಿಸಬೇಕು ಎಂದು ಸೂಚಿಸಿದರು.
ಆರೋಪ ಪ್ರತ್ಯಾರೋಪದ ರಾಜಕಾರಣ ನಮ್ಮದಲ್ಲ; ನಮ್ಮದು ವಿಕಾಸದ- ಅಭಿವೃದ್ಧಿಯ ರಾಜಕಾರಣ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಹಲವು ಯೋಜನೆಗಳಲ್ಲಿ ಕರ್ನಾಟಕವು ಅನುದಾನವನ್ನು ಖರ್ಚು ಮಾಡಿಲ್ಲ ಎಂದು ತಿಳಿಸಿದರು

Girl in a jacket
error: Content is protected !!