ಮನೋಜ್ ಕುಮಾರ್ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ, ಪುಟ್ಟಗೌರಿ ಮದುವೆ ಮತ್ತು ಈಗ ಕನ್ನಡತಿ ಧಾರಾವಾಹಿಯ ಮೂಲಕ ಮನೆ ಮನಗಳಿಗೆ ಪರಿಚಯವಾಗಿರುವ ರಂಜನಿ ರಾಘವನ್ ಅಭಿನಯದ ಚಿತ್ರ ʻಟಕ್ಕರ್ʼ. ವಿ. ರಘುಶಾಸ್ತ್ರಿ ನಿರ್ದೇಶನದ ಸಿನಿಮಾ ಬರುವ ಮೇ 6ರಂದು ತೆರೆಗೆ ಬರುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಆರಂಭಿಸಿದೆ.
ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಹಿರಿಯ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಮನೆಗೆ ತೆರಳಿ ಮೀನಾ ತೂಗುದೀಪ ಅವರ ಆಶೀರ್ವಾದ ಪಡೆದಿದಾರೆ. ವರಸೆಯಲ್ಲಿ ಮನೋಜ್ ಕುಮಾರ್ ತೂಗುದೀಪ ಶ್ರೀನಿವಾಸ್ ಅವರ ಮೊಮ್ಮಗ. ಹೀಗಾಗಿ ಮನೆಯ ಹಿರಿಯರಾದ ಮೀನಾ ತೂಗುದೀಪ ಅವರ ಶುಭಕೋರಿಕೆ ಪಡೆದು ಮುಂದಡಿ ಇಡುವುದನ್ನು ಪಾಲಿಸಿಕೊಂಡುಬಂದಿದ್ದಾರೆ.
ʻʻನನ್ನ ಮೊಮ್ಮಗ ಮನೋಜ್ ನಾಯಕನಾಗಿ ನಟಿಸಿರುವ ʻಟಕ್ಕರ್ʼ ಸಿನಿಮಾ ತೆರೆಗೆ ಬರುತ್ತಿದೆ. ಮೊಬೈಲಿನಿಂದ ಆಗುತ್ತಿರುವ ಅನಾಹುತಗಳ ಕುರಿತಾಗಿ ಚಿತ್ರ ರೂಪಿಸಿದ್ದಾರೆ. ಪ್ರತಿಯೊಬ್ಬರೂ ಈ ಸಿನಿಮಾವನ್ನು ನೋಡುವ ಮೂಲಕ ಸಿನಿಮಾವನ್ನು ಗೆಲ್ಲಿಸಬೇಕು. ನಾನು ಇತ್ತೀಚೆಗೆ ಮನೋಜ್ ಮನೆಗೆ ಹೋಗಿದ್ದೆ. ಅಲ್ಲಿದ್ದ ಅವನ ಫೋಟೋ ನೋಡಿ. ನನಗೆ ನನ್ನ ಮಗ ದರ್ಶನ್ ನನ್ನೇನೋಡಿದ ಹಾಗಾಯ್ತು. ನಮ್ಮ ಕುಟುಂಬದ ಹುಡುಗ ಈಗ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಪರಿಚಯಗೊಳ್ಳುತ್ತಿರುವುದು ನನಗೆ ಅತೀವ ಖುಷಿ ತಂದಿದೆʼʼ ಎಂದು ಮೀನಾ ತೂಗುದೀಪ ಶ್ರೀನಿವಾಸ್ ಹೇಳಿದ್ದಾರೆ.
ಎಸ್.ಎಲ್.ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ನಿರ್ಮಿಸಿರುವ ಚಿತ್ರ ಟಕ್ಕರ್. ಮಣಿ ಕಾಂತ್ ಕದ್ರಿ ಸಂಗೀತ ನೀಡಿರುವ ಟಕ್ಕರ್ ಚಿತ್ರದ ಹಾಡುಗಳನ್ನು ವಿಜಯ ಪ್ರಕಾಶ್- ಅನುರಾಧಾ ಭಟ್, ಸಂಜಿತ್ ಹೆಗ್ಡೆ, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಚಿತ್ರದ ಟ್ರೇಲರ್ ಕೂಡಾ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇಡೀ ಜಗತ್ತನ್ನು ನಲುಗುವಂತೆ ಮಾಡಿರುವ, ಅದರಲ್ಲೂ ಹೆಣ್ಣುಮಕ್ಕಳನ್ನು ಹಿಂಡುತ್ತಿರುವ ಸೈಬರ್ ಕ್ರೈಂ ಸುತ್ತ ಹೆಣೆದಿರುವ ಕತೆಯನ್ನು ರೋಚಕವಾಗಿ ಹಿಡಿದಿಟ್ಟಿರುವ ಚಿತ್ರ ಟಕ್ಕರ್. ಭಜರಂಗಿ ಖ್ಯಾತಿಯ ಸೌರವ್ ಲೋಕಿ ಇಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಲಿಯಮ್ಸ್ ಡೇವಿಡ್ ಟಕ್ಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ. ಪುಟ್ಟಗೌರಿಯಾಗಿ ಎಂಟ್ರಿ ಕೊಟ್ಟು ಸದ್ಯ ಕನ್ನಡತಿಯಾಗಿ ಮನೆಮಾತಾಗಿರುವ ರಂಜನಿ ರಾಘವನ್ ಮನೋಜ್ ಕುಮಾರ್ ಜೋಡಿಯಾಗಿ ನಟಿಸಿದ್ದಾರೆ.
ಟಕ್ಕರ್ ಚಿತ್ರದಲ್ಲಿ ಸಾಕಷ್ಟು ಕಲಾವಿದರ ದಂಡೇ ಇದೆ. ಸಾಧು ಕೋಕಿಲಾ, ಅಶ್ವಿನ್ ಹಾಸನ್, ಆದಿ, ಕಾಮಿಡಿ ಕಿಲಾಡಿ ನಯನಾ, ಕುರಿ ಸುನಿಲ್, ಜೈಜಗದೀಶ್, ಈಟಿವಿ ಶ್ರೀಧರ್, ಹಿರಿಯ ನಟಿ ಸುಮಿತ್ರಾ ಸೇರಿದಂತೆ ಇನ್ನೂ ಅನೇಕಲ ಕಲಾವಿದರು ಟಕ್ಕರ್ ಚಿತ್ರದ ಭಾಗವಾಗಿದ್ಧಾರೆ. ಹೀರೋ ಇಂಟ್ರಡಕ್ಷನ್ ಹಾಡಿಗೆ ಹೆಚ್.ಎಂ.ಟಿ.ಯಲ್ಲಿ ವಿಶೇಷ ಸೆಟ್ ಕೂಡಾ ಹಾಕಲಾಗಿತ್ತು. ಮಲೇಶಿಯಾ, ಮೈಸೂರು, ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆ ಚಿತ್ರೀಕರಣ ನಡೆಸಲಾಗಿದೆ.